
ಹೊಸದಿಲ್ಲಿ: ಲೋಕಸಭಾ ಅಧಿವೇಶನದಲ್ಲಿ ‘ಆಪರೇಷನ್ ಸಿಂಧೂರ’ ವಿಚಾರದ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಇನ್ನೂ 20 ವರ್ಷಗಳ ಕಾಲ ನೀವು ಅಲ್ಲೇ (ವಿಪಕ್ಷ ಸ್ಥಾನ) ಇರುತ್ತೀರಿ” ಎಂದು ಛೇಡಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಕದನ ವಿರಾಮದಲ್ಲಿ ಅಮೆರಿಕದ ಪಾತ್ರವಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ನೀಡಿದ ಭರವಸೆಯ ಬಗ್ಗೆ ವಿಪಕ್ಷಗಳು ಪ್ರಶ್ನೆಗಳನ್ನು ಎತ್ತಿದಾಗ ಅಮಿತ್ ಶಾ ಕೆರಳಿದರು. “ಅವರು (ವಿರೋಧ ಪಕ್ಷ) ಭಾರತದ ವಿದೇಶಾಂಗ ಸಚಿವರ ಮೇಲೆ ನಂಬಿಕೆ ಹೊಂದಿಲ್ಲ, ಆದರೆ ಬೇರೆ ಯಾವುದೋ ದೇಶದ ಮೇಲೆ ನಂಬಿಕೆ ಹೊಂದಿದ್ದಾರೆ ಎಂಬುದರ ಬಗ್ಗೆ ನನಗೆ ಆಕ್ಷೇಪವಿದೆ” ಎಂದು ಶಾ ಹೇಳಿದರು.
‘ಪಕ್ಷದಲ್ಲಿ ವಿದೇಶಿಯರ ಪ್ರಾಮುಖ್ಯತೆ’ ಬಗ್ಗೆ ಟೀಕೆ
“ಅವರ ಪಕ್ಷದಲ್ಲಿ ವಿದೇಶಿಯರ ಪ್ರಾಮುಖ್ಯತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಇದರರ್ಥ ಅವರ ಪಕ್ಷದ ಎಲ್ಲಾ ವಿಷಯಗಳನ್ನು ಸದನದಲ್ಲಿ ಹೇರಬೇಕು ಎಂದಲ್ಲ. ಇದೇ ಕಾರಣಕ್ಕಾಗಿ ಅವರು ಅಲ್ಲಿ ಕುಳಿತಿದ್ದಾರೆ (ವಿರೋಧ ಪಕ್ಷದಲ್ಲಿ ಮುಂದಿನ 20 ವರ್ಷಗಳ ಕಾಲ ಅಲ್ಲೇ ಕುಳಿತುಕೊಳ್ಳುತ್ತಾರೆ” ಎಂದು ಗೃಹ ಸಚಿವರು ನೇರವಾಗಿ ಟೀಕಿಸಿದರು.
ಸಂಸತ್ತಿನಲ್ಲಿ ‘ಆಪರೇಷನ್ ಸಿಂಧೂರ’ ಕುರಿತ ಚರ್ಚೆಯ ಸಂದರ್ಭದಲ್ಲಿ ಪಹಲ್ಗಾಮ್ ದಾಳಿಗೆ ಭಾರತದ ನಿಲುವು ಮತ್ತು ಪ್ರತಿಕ್ರಿಯೆಯ ಬಗ್ಗೆ ಜೈಶಂಕರ್ ಮಾತನಾಡುತ್ತಿದ್ದರು. ಆದರೆ ಪ್ರತಿಪಕ್ಷಗಳು ತಮ್ಮ ಭಾಷಣದ ಸಮಯದಲ್ಲಿ ಹಲವಾರು ಬಾರಿ ಅಡ್ಡಿಪಡಿಸಿದಾಗ, ಅಮಿತ್ ಶಾ ಮಧ್ಯಪ್ರವೇಶಿಸಿ, “ನಿಮ್ಮ ಸ್ವಂತ ವಿದೇಶಾಂಗ ಸಚಿವರನ್ನು ನೀವು ನಂಬುವುದಿಲ್ಲವೇ?” ಎಂದು ವಿರೋಧ ಪಕ್ಷದ ನಾಯಕರ ಗದ್ದಲದ ನಡುವೆ ಪ್ರಶ್ನಿಸಿದರು.