
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಗೊಳಿಸಿ, ನಂತರ ಅದರ ದರಗಳನ್ನು ವಿಪರೀತವಾಗಿ ಹೆಚ್ಚಿಸಿ ಈಗ ಕಡಿತಗೊಳಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ದಸರಾ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಅವರು, “ಎಂಟು ವರ್ಷಗಳ ಕಾಲ ವಿಪರೀತ ಜಿಎಸ್‌ಟಿ ವಸೂಲಿ ಮಾಡಿದ ಹಣವನ್ನು ಭಾರತೀಯರಿಗೆ ವಾಪಸ್ ಕೊಡುತ್ತೀರಾ?” ಎಂದು ಪ್ರಶ್ನಿಸಿದರು.
“ಶೇ. 18 ಮತ್ತು ಶೇ. 28ರಷ್ಟು ಜಿಎಸ್‌ಟಿ ಹೆಚ್ಚಿಸಿದ್ದರ ಬಗ್ಗೆ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಇಷ್ಟು ವರ್ಷಗಳ ಕಾಲ ತೆರಿಗೆ ವಸೂಲಿ ಮಾಡಿದವರೇ ಈಗ ಅದರ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಭಾರತೀಯರಿಗೆ ಎಷ್ಟು ನಾಜೂಕಾಗಿ ಟೋಪಿ ಹಾಕುತ್ತಿದ್ದಾರೆ ನೋಡಿ, ನೀವು ಇದಕ್ಕೆಲ್ಲಾ ಮರುಳಾಗಬಾರದು” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
‘ನಾನು ಅವರಿಗಿಂತ ಉತ್ತಮ ಹಿಂದೂ’
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ವಿರೋಧಿಸಿದವರಿಗೆ ತಿರುಗೇಟು ನೀಡಿದ ಸಿಎಂ, “ನನ್ನ ಹೆಸರಲ್ಲೇ ಇಬ್ಬರು ದೇವರಿದ್ದಾರೆ – ‘ಸಿದ್ದ’ ಎಂದರೆ ಶಿವ ಮತ್ತು ‘ರಾಮ’ ಎಂದರೆ ವಿಷ್ಣು”. ಹೀಗಾಗಿ ಬಾನು ಮುಷ್ತಾಕ್ ಅವರಿಗೆ ವಿರೋಧ ವ್ಯಕ್ತಪಡಿಸಿದ ಮೂರ್ಖರಿಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಂವಿಧಾನದ ಪೀಠಿಕೆ ಓದಲು ಹೇಳಿದೆ ಎಂದು ತಿಳಿಸಿದರು.
ಬಾನು ಮುಷ್ತಾಕ್ ಅವರ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದವರು ಮಾಜಿ ಸಂಸದರಾಗಿದ್ದು, ಅವರಿಗೆ ದಸರಾ ನಾಡಹಬ್ಬ ಎನ್ನುವುದು ಗೊತ್ತಿಲ್ಲ. ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೋಗಿ ಸೋತರು. ನನ್ನ ಹೆಸರಿನಲ್ಲಿ ಇಬ್ಬರು ದೇವರನ್ನು ಹೊಂದಿರುವ ನಾನು, ಅವರಿಗಿಂತ ಉತ್ತಮ ಹಿಂದೂ ಎಂದು ಸಿದ್ದರಾಮಯ್ಯ ಹೇಳಿದರು.



































