
ಯೆಮೆನ್: ಮಧ್ಯಪ್ರಾಚ್ಯದ ಪ್ರಬಲ ಮಿತ್ರರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಡುವಿನ ಶೀತಲ ಸಮರ ಈಗ ಯೆಮೆನ್ ಮಣ್ಣಿನಲ್ಲಿ ನೇರ ಸಂಘರ್ಷಕ್ಕೆ ತಿರುಗಿದೆ. ಶುಕ್ರವಾರ ದಕ್ಷಿಣ ಯೆಮೆನ್‌ನ ಹದ್ರಾಮೌತ್ ಪ್ರಾಂತ್ಯದಲ್ಲಿ ಸೌದಿ ಅರೇಬಿಯಾದ ಯುದ್ಧ ವಿಮಾನಗಳು ನಡೆಸಿದ ಭೀಕರ ದಾಳಿಯಲ್ಲಿ ಯುಎಇ ಬೆಂಬಲಿತ ‘ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್’ (STC) ಸಂಘಟನೆಯ ಕನಿಷ್ಠ 20 ಹೋರಾಟಗಾರರು ಮೃತಪಟ್ಟಿದ್ದಾರೆ.
ಘಟನೆಯ ವಿವರ: ಯೆಮೆನ್‌ನ ತೈಲ ಸಮೃದ್ಧ ಪ್ರದೇಶವಾದ ಹದ್ರಾಮೌತ್‌ನಲ್ಲಿರುವ ‘ಅಲ್-ಖಾಸಾ’ ಮಿಲಿಟರಿ ಶಿಬಿರವನ್ನು ಗುರಿಯಾಗಿಸಿಕೊಂಡು ಸೌದಿ ಪಡೆಗಳು ಸತತ 7 ಬಾರಿ ವಾಯುದಾಳಿ ನಡೆಸಿವೆ. ಈ ದಾಳಿಯಲ್ಲಿ 20 ಜನರು ಸಾವನ್ನಪ್ಪಿರುವುದು ಮಾತ್ರವಲ್ಲದೆ, 20ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಎಸ್‌ಟಿಸಿ ನಾಯಕ ಮೊಹಮ್ಮದ್ ಅಬ್ದುಲ್ಮಾಲಿಕ್ ಖಚಿತಪಡಿಸಿದ್ದಾರೆ. ಕೇವಲ ಮಿಲಿಟರಿ ಶಿಬಿರವಲ್ಲದೆ, ಸೇಯುನ್ ನಗರದ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲ ಆಯಕಟ್ಟಿನ ಸ್ಥಳಗಳ ಮೇಲೆಯೂ ಬಾಂಬ್ ಮಳೆ ಸುರಿಸಲಾಗಿದೆ.
ಸಂಘರ್ಷಕ್ಕೆ ಕಾರಣವೇನು? ಸೌದಿ ಅರೇಬಿಯಾ ಬೆಂಬಲಿತ ಯೆಮೆನ್ ಸರ್ಕಾರವು ತನ್ನ ದೇಶದಿಂದ ಸೈನ್ಯವನ್ನು ಹಿಂಪಡೆಯಲು ಯುಎಇಗೆ 24 ಗಂಟೆಗಳ ಅಂತಿಮ ಗಡುವು ನೀಡಿತ್ತು. ಈ ಗಡುವು ಮುಗಿಯುತ್ತಿದ್ದಂತೆಯೇ ಸೌದಿ ತನ್ನ ಆಕ್ರಮಣಕಾರಿ ನಡೆಯನ್ನು ಪ್ರದರ್ಶಿಸಿದೆ. ಸೌದಿ ಅರೇಬಿಯಾ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರ ಸರ್ಕಾರವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದರೆ, ಯುಎಇ ದಕ್ಷಿಣ ಯೆಮೆನ್‌ನ ಪ್ರತ್ಯೇಕತಾವಾದಿ ಗುಂಪುಗಳಿಗೆ ಶಸ್ತ್ರಾಸ್ತ್ರ ಮತ್ತು ಹಣಕಾಸಿನ ನೆರವು ನೀಡುತ್ತಿದೆ ಎಂಬುದು ಸೌದಿಯ ಪ್ರಬಲ ಆರೋಪವಾಗಿದೆ.
ಡಿಸೆಂಬರ್ 30 ರಂದು ಮುಕಲ್ಲಾ ಬಂದರಿನಲ್ಲಿ ಯುಎಇ ಕಳುಹಿಸಿದ ಶಸ್ತ್ರಾಸ್ತ್ರಗಳ ಮೇಲೆ ಸೌದಿ ದಾಳಿ ನಡೆಸಿದ ನಂತರ ಈ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಸದ್ಯಕ್ಕೆ ದಕ್ಷಿಣ ಯೆಮೆನ್ ಅಕ್ಷರಶಃ ಯುದ್ಧಭೂಮಿಯಾಗಿ ಮಾರ್ಪಟ್ಟಿದ್ದು, ಅರಬ್ ರಾಷ್ಟ್ರಗಳ ಈ ಆಂತರಿಕ ಕಲಹ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.



































