
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಾವಳ್ಳಿ ಕ್ರಾಸ್ ಬಳಿ ಶನಿವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ನಿವಾಸಿಗಳಾದ ನಿಲವ್ವ ಹರದೊಳ್ಳಿ (40), ಗಿರಿಜವ್ವಾ ಬೂದನ್ನವರ (30) ಹಾಗೂ 45 ವರ್ಷ ವಯಸ್ಸಿನ ಓರ್ವ ಅನಾಮಧೇಯ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೆಲಸದ ನಿಮಿತ್ತ ಬಾಗಲಕೋಟೆಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು. ಗಾಯಗೊಂಡವರಲ್ಲಿ ಕೆಲ ಮಕ್ಕಳು ಸಹ ಇದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಘಟನೆ ಕುರಿತು ಯಲ್ಲಾಪುರ ಪೊಲೀಸರು ತನಿಖೆ ನಡೆಸುತ್ತಿದ್ದು, ಲಾರಿ ಚಾಲಕ ಇಂಡಿಕೇಟರ್ ಹಾಕದೆ ಲಾರಿ ನಿಲ್ಲಿಸಿದ್ದು ಮತ್ತು ಬಸ್ ಚಾಲಕ ಯಮನಪ್ಪ ಮಾಗಿ ಓವರ್‌ಟೇಕ್ ಮಾಡುವಾಗ ಮಾಡಿದ ತಪ್ಪೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಯಲ್ಲಾಪುರ ಸಿಪಿಐ ರಮೇಶ್ ಹಾನಾಪುರ ಮತ್ತು ಪಿಎಸ್‌ಐ ಯಲ್ಲಾಲಿಂಗ್ ಕುನ್ನೂರು ಹಾಗೂ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡರು. ಮೃತರ ದೇಹಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. ಈ ಘಟನೆಯು ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸ್ ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಲ್ಲಾಪುರ-ಅಂಕೋಲಾ ರಸ್ತೆ ಹೆಚ್ಚು ದಟ್ಟ ಕಾಡು ಹಾಗೂ ಘಟ್ಟ ಪ್ರದೇಶದಿಂದ ಕೂಡಿರುವುದರಿಂದ ಈ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.