
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಸಮೀಪಿಸುತ್ತಿರುವಂತೆ, ಪಕ್ಷದ ಒಳಗಿನ ಆಂತರಿಕ ರಾಜಕೀಯ ತೀವ್ರಗೊಳ್ಳುತ್ತಿದೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಣ, ಸೋಮವಾರದಿಂದ ನಾಲ್ಕು ದಿನಗಳ ಕಾಲ ದಿಲ್ಲಿಯಲ್ಲಿ ಬೀಡು ಬೀಡಲಿದ್ದು, ಹೈಕಮಾಂಡ್ ಒಲವು ಸಂಪಾದಿಸಲು ಮುಂದಾಗಿದೆ.
ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಹಾಗೂ ಇತರ ಪ್ರಮುಖರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ದಿಲ್ಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಈ ತಂಡದ ಪ್ರಮುಖರಾದ ಅರವಿಂದ ಲಿಂಬಾವಳಿ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದು, ಉಳಿದ ನಾಯಕರೂ ದಿಲ್ಲಿಯಲ್ಲಿ ಹೈಕಮಾಂಡ್ ಭೇಟಿಗೆ ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.
ಸದ್ಯ ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುಲಭ ಭೇಟಿಗೆ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಈ ಬಣ ದಿಲ್ಲಿಗೆ ತೆರಳುತ್ತಿದೆ. ಇದೇ ತಂಡ ಸಂಸತ್‌ನಲ್ಲಿ ಸೋಮವಾರ ಮಂಡನೆಯಾಗಲಿರುವ ವಕ್ಸ್ ಆಸ್ತಿಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯನ್ನೂ ಸಾಕ್ಷೀಕರಿಸುವ ಸಾಧ್ಯತೆ ಇದೆ. ಸಂಸತ್‌ನಲ್ಲಿ ಜಗದಂಬಿಕಾ ಪಾಲ್ ಈ ವರದಿಯನ್ನು ಮಂಡಿಸಲಿದ್ದಾರೆ.
ಫೆಬ್ರವರಿ 5ರಂದು ದಿಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದು, ನಂತರ ಫಲಿತಾಂಶ ಹಾಗೂ ಸರ್ಕಾರ ರಚನೆ ಕಸರತ್ತು ನಡೆಯುವ ಕಾರಣ, ಬಿಜೆಪಿ ಹೈಕಮಾಂಡ್ ಈ ನಡುವೆಯೂ ರಾಜ್ಯಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ಮಾತುಕತೆ ನಡೆಸಬಹುದೆಂಬ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ, ಇತ್ತೀಚೆಗೆ ನಡೆದ ಜಿಲ್ಲಾಧ್ಯಕ್ಷರ ಆಯ್ಕೆ ಕ್ರಮಬದ್ಧವಾಗಿರಲಿಲ್ಲ ಎಂಬ ಗಂಭೀರ ದೂರುಗಳನ್ನು ಹೈಕಮಾಂಡ್‌ಗೆ ಈ ಬಣ ತಿಳಿಸುವ ಸಾಧ್ಯತೆಯೂ ಇದೆ.