
ಕೊಳಕೆ ಇರ್ವತ್ತೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳಕೆ ಇರ್ವತ್ತೂರಿನಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯನ್ನು ಪರಿಚಯಿಸುವ ಉದ್ದೇಶದಿಂದ ಯಕ್ಷ ಕಲಾರಂಗ (ರಿ) ಕಾರ್ಕಳ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಇವರ ವತಿಯಿಂದ ಯಕ್ಷಗಾನ ತರಬೇತಿ ಶಿಬಿರಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಎಸ್. ಕೋಟ್ಯಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟನೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಯಕ್ಷಕಲಾರಂಗದ ಕಾರ್ಕಳ ಘಟಕದ ಅಧ್ಯಕ್ಷರಾದ ವಿಜಯ ಶೆಟ್ಟಿ, ಸಂಚಾಲಕರಾದ ಪದ್ಮನಾಭ ಗೌಡ, ಯಕ್ಷಧ್ರುವ ಪಟ್ಲ ಫೌಂಡೇಶನ್ ಗೋವಾ ಘಟಕದ ಅಧ್ಯಕ್ಷರಾದ ಗಣೇಶ್ ಶೆಟ್ಟಿ, ಯಕ್ಷಗುರುಗಳಾದ ಶ್ರೀ ಮಹಾವೀರ ಪಾಂಡಿ, ಊರಿನ ಹಿರಿಯರಾದ ಶ್ರೀ ಜಯಕೀರ್ತಿ ಕಡಂಬರು, ನಿವೃತ್ತ ಶಿಕ್ಷಕರಾದ ರಮಾನಾಥ ಶೆಣೈ, ಎಸ್‌ಡಿಎಂಸಿ ಅಧ್ಯಕ್ಷರಾದ ಮಧ್ವರಾಜ್, ಶಾಲಾ ಹಿತೈಷಿ ಚಂದ್ರರಾಜ ಅಧಿಕಾರಿ, ಗೋಪಾಲ ಪೂಜಾರಿ ಗರಡಿಮನೆ, ಮತ್ತು ಪಂಚಾಯತ್ ಸದಸ್ಯರಾದ ಶೇಖರ ಅಂಚನ್, ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಯಕ್ಷಗುರುಗಳಾದ ಶ್ರೀ ಮಹಾವೀರ ಪಾಂಡಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕರಾದ ಆನಂದ್ ಪೂಜಾರಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಅರುಣ್ ಕುಮಾರ್ ಶೇಟ್ ಅಚ್ಚುಕಟ್ಟಾಗಿ ನಿರೂಪಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಶಕುಂತಲಾ ರಾವ್ ವಂದನಾರ್ಪಣೆ ಮಾಡಿದರು. ಈ ತರಬೇತಿ ಶಿಬಿರವು ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಮೂಡಿಸಿ, ಕಲಾ ಪ್ರತಿಭೆಯನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.