
ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಪತ್ನಿ ತನಗೆ ಗೌರವ ಕೊಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಘಟನೆ ಸುರಪುರದ ಬಿಎಸ್‌ಎನ್‌ಎಲ್ ಕಚೇರಿ ಬಳಿಯ ಡೊಣ್ಣಿಗೇರಾದಲ್ಲಿ ಭಾನುವಾರ (ಅಕ್ಟೋಬರ್ 5) ತಡರಾತ್ರಿ ನಡೆದಿದೆ.
ಸಂಗಪ್ಪ ಕಕ್ಕೇರಾ ಎಂಬ ವ್ಯಕ್ತಿ ತಡರಾತ್ರಿ ಮನೆಯಲ್ಲಿ ತನ್ನ ಪತ್ನಿ ಮರಿಯಮ್ಮ ಅವರೊಂದಿಗೆ ಜಗಳವಾಡಿದ್ದಾನೆ. ಜಗಳದ ಉಲ್ಬಣದಲ್ಲಿ ಸಂಗಪ್ಪ ಕೊಡಲಿಯಿಂದ ಮರಿಯಮ್ಮ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಮರಿಯಮ್ಮ ಅವರು ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದಾರೆ.
ಭೀಕರ ಕೃತ್ಯ ಎಸಗಿದ ನಂತರ ಆರೋಪಿ ಸಂಗಪ್ಪ ಕಕ್ಕೇರಾ ತಾನು ಬಳಸಿದ ಕೊಡಲಿ ಸಮೇತ ನೇರವಾಗಿ ಸುರಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸುರಪುರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಉಮೇಶ್ ನಾಯಕ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆಯ ಅಣ್ಣ ನೀಡಿದ ದೂರಿನ ಮೇರೆಗೆ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




































