
ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣವು ಹೊಸ ತಿರುವು ಪಡೆದುಕೊಂಡಿದ್ದು, ಭಾನುವಾರದಂದು ಶೋಧ ಕಾರ್ಯಕ್ಕೆ ವಿರಾಮ ನೀಡಲಾಗಿದೆ. ಆದರೆ, ತನಿಖಾ ತಂಡವು ಸ್ಥಳದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಿದೆ. ದೂರುದಾರರು ಗುರುತಿಸಿರುವ 13 ಸ್ಥಳಗಳಲ್ಲಿ, ಈಗಾಗಲೇ ಶೋಧ ಕಾರ್ಯ ನಡೆದ 10 ಪಾಯಿಂಟ್‌ಗಳಿಗೂ ಬಿಗಿ ಕಾವಲು ಹಾಕಲಾಗಿದೆ. ವಿಶೇಷವಾಗಿ, ಮೂರು ಪಾಯಿಂಟ್‌ಗಳಲ್ಲಿ ಗನ್‌ಮ್ಯಾನ್‌ಗಳನ್ನು ನೇಮಿಸಲಾಗಿದೆ.
ಈ ಪ್ರಕರಣವು ಬೆಳಕಿಗೆ ಬಂದ ನಂತರ, ಅನಾಮಿಕ ಶವಗಳನ್ನು ಹೂತುಹಾಕಿರುವುದಾಗಿ ಆರೋಪಿಯು ತಪ್ಪೊಪ್ಪಿಕೊಂಡಿದ್ದನು. ಇದರ ಆಧಾರದ ಮೇಲೆ, ವಿಶೇಷ ತನಿಖಾ ತಂಡ (SIT) ಧರ್ಮಸ್ಥಳದ ನೇತ್ರಾವತಿ ನದಿಯ ಸ್ನಾನಘಟ್ಟದ ಸಮೀಪ ಅಸ್ಥಿಪಂಜರಗಳ ಪತ್ತೆಗಾಗಿ ಉತ್ಖನನ ಕಾರ್ಯ ನಡೆಸುತ್ತಿದೆ. SIT ತಂಡವು 6ನೇ ಪಾಯಿಂಟ್‌ನಲ್ಲಿ ಶೋಧ ನಡೆಸುತ್ತಿದ್ದಾಗ ಒಟ್ಟು 12 ಮೂಳೆಗಳು ದೊರೆತಿವೆ. ತಲೆಬುರುಡೆಯ ಚೂರುಗಳು ಮತ್ತು ಕೈ ಮೂಳೆಗಳು ಸಹ ಇವುಗಳಲ್ಲಿ ಸೇರಿವೆ.
ಈ ಮೂಳೆಗಳನ್ನು ತನಿಖೆಗಾಗಿ ಮತ್ತು ವಿಧಿವಿಜ್ಞಾನ ಪರೀಕ್ಷೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ವೈದ್ಯಕೀಯ ತಂಡವು ಈ ಮೂಳೆಗಳು ಯಾವ ವ್ಯಕ್ತಿಗೆ ಸೇರಿವೆ, ಅವರ ಲಿಂಗ, ವಯಸ್ಸು ಮತ್ತು ಸಾವಿನ ಕಾರಣದ ಕುರಿತು ಅಧ್ಯಯನ ನಡೆಸಲಿದೆ. ಈ ವೈಜ್ಞಾನಿಕ ವಿಶ್ಲೇಷಣೆಯಿಂದ ಪ್ರಕರಣದ ತನಿಖೆಯಲ್ಲಿ ಮಹತ್ವದ ಸುಳಿವುಗಳು ಹೊರಬರುವ ಸಾಧ್ಯತೆ ಇದೆ. ತನಿಖೆ ಇನ್ನಷ್ಟು ಆಳಕ್ಕೆ ಇಳಿದಿದ್ದು, ಮುಂದಿನ ದಿನಗಳಲ್ಲಿ ಈ ನಿಗೂಢ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.