
ಉಡುಪಿ: ಏಳು ದಿನಗಳಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದ ವಿದುಷಿ ದೀಕ್ಷಾ ವಿ. ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ ರೆಮೋನಾ ಎವೆಟ್ಟೆ ಪೆರೇರಾ ಅವರ ಹೆಸರಿನಲ್ಲಿದ್ದ ಈ ಹಿಂದಿನ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅನ್ನು ಮೀರಿಸಿ, 170 ಗಂಟೆಗಳ ನೃತ್ಯ ಪ್ರದರ್ಶನವನ್ನು ಪೂರ್ಣಗೊಳಿಸಿದ್ದಾರೆ.
ದಾಖಲೆಯ ಸಾಧನೆ
ಆಗಸ್ಟ್ 21 ರಂದು ಮಧ್ಯಾಹ್ನ 3.30ಕ್ಕೆ ತಮ್ಮ ನೃತ್ಯ ಪ್ರದರ್ಶನವನ್ನು ಆರಂಭಿಸಿದ್ದ ದೀಕ್ಷಾ, ಗುರುವಾರ ಸಂಜೆ 5.31ಕ್ಕೆ 170 ಗಂಟೆಗಳನ್ನು ಪೂರೈಸಿದರು. ಈ ಸಾಧನೆಯನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಮುಖ್ಯಸ್ಥ ಮನೀಶ್ ವಿಷ್ಣೋಯಿ ಅವರು ಅಧಿಕೃತವಾಗಿ ಘೋಷಿಸಿದರು.
ದೀಕ್ಷಾ ಅವರ ಅಂತಿಮ ಗುರಿ 9 ದಿನಗಳಲ್ಲಿ 216 ಗಂಟೆಗಳ ಪ್ರದರ್ಶನವನ್ನು ಪೂರ್ಣಗೊಳಿಸುವುದಾಗಿದೆ. ಈ ಐತಿಹಾಸಿಕ ಸಾಧನೆಗಾಗಿ ಹಲವು ಗಣ್ಯರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.