
ಹೆಬ್ರಿ : ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸವಾಲುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮುದ್ರಾಡಿ ಪ್ರೌಢಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ರವರು “ಜನಸಂಖ್ಯೆ ಹೆಚ್ಚಳವು ಬಡತನ, ಅನಾರೋಗ್ಯ, ಶಿಕ್ಷಣದ ಕೊರತೆ ಹಾಗೂ ಉದ್ಯೋಗಾವಕಾಶಗಳ ಕೊರತೆಯಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯುವಲ್ಲಿ ಮಾನವನಿಗೆ ದೊಡ್ಡ ಸವಾಲಾಗಿದೆ” ಎಂದು ಹೇಳಿದರು.
ಮಹಿಳೆಯರು ಉತ್ತಮ ಶಿಕ್ಷಣ ಪಡೆದು ಜಾಗೃತರಾಗಬೇಕು. ಮಹಿಳಾ ಸಬಲೀಕರಣ, ಕುಟುಂಬ ಯೋಜನೆ, ಸರಿಯಾದ ಆರೋಗ್ಯ ಸೌಲಭ್ಯಗಳ ಕುರಿತು ಅರಿವು ಮೂಡಿಸಿಕೊಳ್ಳಬೇಕು ಎಂದು ಬಲ್ಲಾಡಿ ಚಂದ್ರಶೇಖರ ಭಟ್ ತಿಳಿಸಿದರು. ಸುಭದ್ರ ಜೀವನಶೈಲಿ ರೂಪಿಸಿಕೊಂಡು ಸಣ್ಣ ಕುಟುಂಬಗಳ ಪರಿಕಲ್ಪನೆಯನ್ನು ಉತ್ತೇಜಿಸುವುದೇ ವಿಶ್ವ ಜನಸಂಖ್ಯಾ ದಿನಾಚರಣೆಯ ಮೂಲ ಉದ್ದೇಶ ಎಂದು ಅವರು ವಿವರಿಸಿದರು.
ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದ ಅಂಗವಾಗಿ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಂಶಿಕಾ, ಪ್ರತೀಕ್ಷಾ ಮತ್ತು ದಿಶಾಂತ್ ಅವರಿಗೆ ಮುಖ್ಯ ಶಿಕ್ಷಕರು ಬಹುಮಾನ ವಿತರಿಸಿದರು.
ಶಿಕ್ಷಕಿ ಚಂದ್ರಕಾಂತಿ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರೆ, ರಘುಪತಿ ಹೆಬ್ಬಾರ್ ವಂದಿಸಿದರು. ಶಿಕ್ಷಕರಾದ ಮಹೇಶ್ ನಾಯ್ಕ್ ಕೆ. ಮತ್ತು ಶ್ಯಾಮಲಾ ಕಾರ್ಯಕ್ರಮಕ್ಕೆ ಸಹಕರಿಸಿದರು.