
ಉಡುಪಿ, ಫೆಬ್ರವರಿ.17: ಅಂಬಲಪಾಡಿ ಕುಂಜಿಗುಡ್ಡೆ ಬಳಿಯ ನಿರ್ಮಾಣ ಹಂತದ ಮನೆಯಲ್ಲಿ ಛಾವಣಿ ತಗಡು ಅಳವಡಿಸುವ ವೇಳೆ 30 ಅಡಿ ಎತ್ತರದಿಂದ ಬಿದ್ದು ಸುರೇಶ್ ಆಚಾರ್ಯ (38) ದುರ್ಮರಣಕ್ಕೀಡಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಸುಮಾರು ಎರಡು ವಾರಗಳಿಂದ ಈ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುರೇಶ್ ಆಚಾರ್ಯ, ಗುತ್ತಿಗೆದಾರ ಭರತ್ ಅವರ ಸೂಚನೆಯ ಮೇರೆಗೆ ಸಹಾಯಕ ಗಣೇಶ್ ಜೊತೆ ಛಾವಣಿ ಮೇಲಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಘಟನೆಗೆ ಗುತ್ತಿಗೆದಾರ ಭರತ್ ಮತ್ತು ಕಟ್ಟಡದ ಎಂಜಿನಿಯರ್ ದೀಪಕ್ ಕುಮಾರ್ ಅವರ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿಬಂದಿದ್ದು ,ಸುರಕ್ಷಾ ಕ್ರಮಗಳಿಲ್ಲದೆ ಕಾಮಗಾರಿ ನಡೆಸಿದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಮೃತನ ಪತ್ನಿ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪತ್ರಿಕಾ ವಿತರಕರಾಗಿ ಸೇವೆ:
ಸುರೇಶ್ ಆಚಾರ್ಯ ಕಳೆದ 18 ವರ್ಷಗಳಿಂದ ಅಜ್ಜರಕಾಡು, ಬ್ರಹ್ಮಗಿರಿ, ಅಂಬಲಪಾಡಿ ಪ್ರದೇಶದಲ್ಲಿ ಪತ್ರಿಕಾ ವಿತರಣೆಯಲ್ಲಿ ತೊಡಗಿದ್ದವರು. ಅವರ ಅಕಾಲಿಕ ನಿಧನಕ್ಕೆ ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಸಂತಾಪ ವ್ಯಕ್ತಪಡಿಸಿದ್ದಾರೆ.