
ಉಡುಪಿ: ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಿಂದ ಭದ್ರ ಕೊಠಡಿಯೊಂದರಲ್ಲಿ ಗೃಹಬಂಧನದಲ್ಲಿದ್ದ ಮನೋರೋಗಿ ಮಹಿಳೆಯನ್ನು ಖಚಿತ ಮಾಹಿತಿಯ ಆಧಾರದ ಮೇಲೆ ವಿಶು ಶೆಟ್ಟಿ ಅಂಬಲಪಾಡಿಯವರು ಸಖಿ ಸೆಂಟರಿನ ಸಿಬ್ಬಂದಿ ಹಾಗೂ 112 ಪೊಲೀಸ್ ಸಹಾಯದಿಂದ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ಜುಲೈ 5ರ ಸಂಜೆ ನಡೆದಿದೆ.
ಮಹಿಳೆ ಬೇಬಿ (38) ಅಮಾನವೀಯ ಗೃಹ ಬಂಧನ ದಿಂದ ರಕ್ಷಿಸಲ್ಪಟ್ಟವರು. ವಿವಾಹಿತರಾಗಿದ್ದು ಸಣ್ಣ ಇಬ್ಬರು ಮಕ್ಕಳಿದ್ದಾರೆ. ಮನೋರೋಗಿಯಾದ ಮಹಿಳೆಯನ್ನು ವರುಷದಿಂದ ಗೃಹಬಂಧನದಲ್ಲಿಟ್ಟು ಸರಿಯಾದ ಚಿಕಿತ್ಸೆ ಯಿಂದ ವಂಚಿತರಾಗಿದ್ದಾರೆ.
ಘಟನಾ ಸ್ಥಳಕ್ಕೆ ತೆರಳಿದಾಗ ಕಿಟಕಿಯಲ್ಲಿ ಮಹಿಳೆ ತನ್ನನ್ನು ರಕ್ಷಿಸಿ ಬದುಕಲು ಆಗುತ್ತಿಲ್ಲ ಹಿಂಸೆಯಿಂದ ಕಂಗಾಲಾಗಿದ್ದೇನೆ. ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ನನ್ನನ್ನು ಪಾರು ಮಾಡಿ ಎಂದು ಅಂಗಲಾಚಿ ಬೊಬ್ಬಿಡುತ್ತಿದ್ದರು. ಭದ್ರವಾದ ಬಾಗಿಲು ಹಾಗೂ ಬೀಗ ಇದ್ದು ಸಣ್ಣ ಕಿಟಕಿಯಿಂದ ಆಹಾರ ನೀಡುತ್ತಿದ್ದರು. ಮಳೆ ಗಾಳಿಗೆ ನನ್ನ ಮೇಲೆ ದಯೆ ತೋರದೆ ನಾಯಿಯ ಬದುಕಿಗಿಂತ ಕಡೆಯಾಗಿದೆ ರಕ್ಷಿಸಿ ಎಂದು ಗೋಗರೆಯುತ್ತಿದ್ದರು.
ಬಂಧ ಮುಕ್ತವಾದ ಮಹಿಳೆಯನ್ನು ಸಂತೈಸಿದಾಗ ಬಾಳಿಗಾ ಆಸ್ಪತ್ರೆಯ ಚಿಕಿತ್ಸೆಯಿಂದ ನಾನು ಗುಣಮುಖಲಾಗಿದ್ದು ಕಳೆದ 3-4 ವರುಷಗಳಿಂದ ಚಿಕಿತ್ಸೆ ಇಲ್ಲದೇ ಈ ಪರಿಸ್ಥಿತಿ ದಯಮಾಡಿ ಬಾಳಿಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಇಲ್ಲಿ ಬಿಡಬೇಡಿ ಎಂದಿದ್ದು ಮಹಿಳೆಯ ಅನತಿಯಂತೆ ಬಾಳಿಗಾ ಆಸ್ಪತ್ರೆಗೆ ವಿಶು ಶೆಟ್ಟಿ ಅಂಬಲಪಾಡಿ ದಾಖಲಿಸಿದ್ದಾರೆ.
ಮನೋರೋಗಿಗಳೊಂದಿಗೆ ಬದುಕುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಸಂಬಂಧಿಕರು ಅನಿವಾರ್ಯವಾಗಿ ಇಂತಹ ಸನ್ನಿವೇಶಗಳಿಗೆ ಶರಣಾಗುತ್ತಾರೆ. ಮನೆಯವರಿಂದ ಬಗೆಹರಿಸಲಾಗದಾಗ ಮಹಿಳಾ ಪರ ಇಲಾಖೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಂತಹ ಕೆಲವು ಸಮಸ್ಯೆಗಳನ್ನು ಮನೆಯವರು ಹಾಗೂ ಇಲಾಖೆ ಜಂಟಿಯಾಗಿ ಪರಿಹರಿಸಿದ ಉದಾಹರಣೆಗಳಿವೆ. ಈ ಪ್ರಕರಣದಲ್ಲಿ ಸ್ಥಳಿಯ ಆಶಾ ಕಾರ್ಯಕರ್ತೆಯರು, ಪಂಚಾಯತ್ ಅಧಿಕಾರಿಗಳಿಗೆ ವಿಷಯ ತಿಳಿಯದೆ ಇರುವುದು ವಿಪರ್ಯಾಸ. ತಿಳಿದೂ ಸುಮ್ಮನಿದ್ದರೆ ಅಪರಾಧ. ಇದು ಜಿಲ್ಲಾಡಳಿತಕ್ಕೆ ಅವಮಾನ. ಜೈಲಿನ ಖೈದಿಗಳಿಗೂ ಅನಾರೋಗ್ಯವಾದಾಗ ಚಿಕಿತ್ಸೆ ಪಡೆಯಲು ವ್ಯವಸ್ಥೆ ಇರುವಾಗ ಈ ಮಹಿಳೆಯ ಮನೋರೋಗಕ್ಕೆ ಚಿಕಿತ್ಸೆ ಇಲ್ಲದೆ ಕೂಡಿ ಹಾಕಿರುವುದು ಅಧಿಕಾರಿಗಳ ಸರಿಯಾದ ಮಾರ್ಗದರ್ಶನ ಸ್ಪಂದನೆ ಹಾಗೂ ಜಾಗೃತೆಯ ಕೊರತೆಯೇ ಕಾರಣ. ಮುಂದಿನ ದಿನಗಳಲ್ಲಿ ಯಾರಿಗೂ ಸಹ ಇಂತಹ ಪರಿಸ್ಥಿತಿ ಬಾರದಿರಲಿ. ಮಹಿಳೆಯ ಕೌಟುಂಬಿಕ ಸಮಸ್ಯೆಗೂ ನ್ಯಾಯ ಸಿಗಲಿ. ಮನನೊಂದ ಮಹಿಳೆ ಭಯದ ವಾತವರಣದಲ್ಲಿ ಇರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಮಹಿಳೆಗೆ ಯಾವುದೇ ನೆರವು ನೀಡಲು ಸಿದ್ದ. ಮಾಹಿತಿ ನೀಡಿದ ತಕ್ಷಣ ಸ್ಪಂದಿಸಿದ ಸಖಿ ಸೆಂಟರ್ ಗೆ ಧನ್ಯವಾದಗಳು.
ವಿಶು ಶೆಟ್ಟಿ ಅಂಬಲಪಾಡಿ.