
ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಡಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಕೂಡಾ ವಿಷಾದ ವ್ಯಕ್ತಪಡಿಸಿದ್ದರು. ಇದೀಗ ಹಲ್ಲೆಗೆ ಒಳಗಾದ ಮಹಿಳೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ನಾನು ಮೀನು ಕದ್ದಿದ್ದೇನೆಂದು ಆರೋಪಿಸಿ ಹೊಡೆದಿದ್ದಾರೆ. ಅದಾದ ಬಳಿಕ ನಾನು ಬಂದರಿಗೆ ಹೋಗಿಲ್ಲ. ಇಲ್ಲಿ ಕೆಲಸ ಮಾಡುವುದು ಕಷ್ಟ, ಆದ್ದರಿಂದ ನಾವು ನಮ್ಮ ಊರಿಗೆ ವಾಪಸ್ ಹೋಗುತ್ತಿದ್ದೇವೆ,” ಎಂದರು.
ಅಲ್ಲದೆ, “ಸ್ವಲ್ಪ ಮೀನು ತೆಗೆದದ್ದು ಸತ್ಯ. ಬಂದರಿನಲ್ಲಿ ಅದೊಂದು ಸಾಮಾನ್ಯ ವಿಚಾರ. ಆ ದಿನ ನನ್ನ ಗ್ರಹಚಾರ ಸರಿ ಇರಲಿಲ್ಲ. ಆದರೆ ಈಗ ಇಲ್ಲಿ ಉಳಿಯುವುದು ಕಷ್ಟ. ಯಾರೂ ನನಗೆ ತೊಂದರೆ ಕೊಟ್ಟಿಲ್ಲ. ನನಗೆ ಅವರ ಮೇಲೆ ದ್ವೇಷವಿಲ್ಲ, ಅವರಿಗೆ ನನ್ನ ಮೇಲೆ ದ್ವೇಷವಿಲ್ಲ,” ಎಂದೂ ಹೇಳಿದ್ದಾರೆ.
ಅವರು ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, “ಆ ದಿನ ರಾತ್ರಿ ನಾವು ರಾಜಿ ಮಾಡಿಕೊಂಡಿದ್ದೆವು. ಮೇಲಿಂದ ದೂರು ಕೊಡಲು ಹೇಳಿದ್ದಾರೆ, ಅವರ ಮಾತಿಗೆ ನಾನು ಸಹಿ ಮಾಡಿದ್ದೇನೆ. ಯಾರಿಗೂ ಶಿಕ್ಷೆಯಾಗಬಾರದು, ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು,” ಎಂದು ಹೇಳಿದ್ದಾರೆ.