
ನೀರೆ ಬೈಲೂರು : ಧಾರ್ಮಿಕ ಸೌಹಾರ್ದತೆಗೆ ಹೆಸರಾಗಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆ ಬೈಲೂರು ದಸರಾ ಮಹೋತ್ಸವದಲ್ಲಿ ಒಂದು ಹೃದಯಸ್ಪರ್ಶಿ ಘಟನೆ ನಡೆದಿದೆ. ಹಬ್ಬದ ಮೆರವಣಿಗೆಯ ಸಂಭ್ರಮಕ್ಕೆ ಮುಸ್ಲಿಂ ಸಮುದಾಯದ ಬಾಂಧವರು ಮಾನವೀಯತೆಯ ಸ್ಪರ್ಶ ನೀಡಿ, ಸಾಮರಸ್ಯದ ಸಂದೇಶವನ್ನು ಸಾರಿದ್ದಾರೆ.
ದಸರಾ ಮಹೋತ್ಸವದ ಮೆರವಣಿಗೆಯು ನೀರೆ ಮಸೀದಿ ಬಳಿ ಬಂದಾಗ ಜೆ .ಎಂ ಟವರ್ಸ್ ಬಳಿ , ದಸರಾದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭಕ್ತರು ಮತ್ತು ಅಪಾರ ಜನಸ್ತೋಮಕ್ಕೆ ಮುಸ್ಲಿಂ ಬಾಂಧವರು ತಂಪು ಪಾನೀಯಗಳನ್ನು ವಿತರಿಸಿದರು.
ಮೆರವಣಿಗೆಯು ನೀರೆ ಮಸೀದಿ ಬಳಿ ತಲುಪಿದಾಗ ಅಲ್ಲಿ ನೆರೆದಿದ್ದ ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯದ ಜನರಿಗೆ ತಂಪು ಪಾನೀಯಗಳನ್ನು ವಿತರಿಸುವ ಮೂಲಕ ಮುಸ್ಲಿಂ ಯುವಕರು ಜಾತ್ಯತೀತ ಮೌಲ್ಯಗಳಿಗೆ ಸಾಕ್ಷಿಯಾದರು. ದಸರಾ ಉತ್ಸವದ ಸಡಗರದ ನಡುವೆ ಕಂಡುಬಂದ ಈ ಪರಸ್ಪರ ಗೌರವ ಮತ್ತು ಸಹಕಾರದ ಮನೋಭಾವವು, ಹಬ್ಬದ ಆಚರಣೆಯನ್ನು ಇನ್ನಷ್ಟು ಅರ್ಥಪೂರ್ಣ ಮತ್ತು ಸ್ಮರಣೀಯವಾಗಿಸಿತು.
ಎಲ್ಲಾ ಧರ್ಮದವರು ಒಗ್ಗೂಡಿ ಹಬ್ಬದ ಆಚರಣೆಗೆ ಬೆಂಬಲ ನೀಡಿದ ಈ ನಡೆ, ನೀರೆ ಬೈಲೂರಿನಲ್ಲಿ ಹಿಂದಿನಿಂದಲೂ ನಡೆದು ಬಂದಿರುವ ಕೋಮು ಸೌಹಾರ್ದತೆಯ ಸಂಪ್ರದಾಯವನ್ನು ಇನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗುವ ಭರವಸೆಯನ್ನು ಮೂಡಿಸಿದೆ.



































