
ಉಡುಪಿ : ಕಳೆದ ಕೆಲವು ದಿನಗಳ ಹಿಂದೆ ಉಡುಪಿಯ ಮಿತ್ರ ಆಸ್ಪತ್ರೆ ಬಳಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ ಯುವಕನೋರ್ವನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದ ಅಂಬಲಪಾಡಿಯ ವಿಶು ಶೆಟ್ಟಿ ಅವರ ಮಾನವೀಯ ಪ್ರಯತ್ನದಿಂದ ಇದೀಗ ಯುವಕ ತನ್ನ ಕುಟುಂಬವನ್ನು 12 ವರ್ಷಗಳ ಬಳಿಕ ಸೇರಿಕೊಂಡಿದ್ದಾನೆ.
ನವಲಗುಂದ ಮೂಲದ 33 ವರ್ಷದ ಸುಧಾಕರ ಪವಾರ್, 12 ವರ್ಷಗಳ ಹಿಂದೆ ಮನೆಯಿಂದ ಹೊರಟು ಹೋಗಿ ನಂತರ ಮಾನಸಿಕ ಅಸ್ವಸ್ಥ ಸ್ಥಿತಿಗೆ ತಲುಪಿದ್ದರು. ಇವರನ್ನು ರಕ್ಷಿಸಿದ ವಿಶು ಶೆಟ್ಟಿ ಅವರು ತಕ್ಷಣ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಯುವಕ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿ ಸಹಜ ಸ್ಥಿತಿಗೆ ಮರಳಿದ್ದಾರೆ.
ಸುಧಾಕರ ಪವಾರ್ ಅವರ ಕುಟುಂಬದ ಮಾಹಿತಿ ಲಭ್ಯವಾದ ನಂತರ, ಸಹೋದರ ಶ್ರೀನಿವಾಸ್ ಉಡುಪಿಗೆ ಆಗಮಿಸಿದ್ದಾರೆ. ಬಾಳಿಗಾ ಆಸ್ಪತ್ರೆಯ ವೈದ್ಯರು ರೋಗಿಯ ಸ್ಥಿತಿ ಮತ್ತು ಮುಂದಿನ ಚಿಕಿತ್ಸೆಯ ಬಗ್ಗೆ ಶ್ರೀನಿವಾಸ್‌ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. 12 ವರ್ಷಗಳ ಬಳಿಕ ಸಹೋದರನನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗುವ ಸಂತಸದಲ್ಲಿರುವ ಶ್ರೀನಿವಾಸ್, ಈ ಪುನರ್ಮಿಲನಕ್ಕೆ ಸಹಕರಿಸಿದ ವಿಶು ಶೆಟ್ಟಿ ಹಾಗೂ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅತ್ಯಂತ ಬಡತನದ ಕುಟುಂಬವಾಗಿರುವ ಸುಧಾಕರ ಪವಾರ್ ಅವರ ಕುಟುಂಬಕ್ಕೆ ಚಿಕಿತ್ಸೆಯ 15,500 ರೂ. ವೆಚ್ಚವನ್ನು ಭರಿಸಲು ಸಾಧ್ಯವಾಗದಿದ್ದಾಗ, ವಿಶು ಶೆಟ್ಟಿ ಅವರೇ ಸ್ವತಃ ಆ ವೆಚ್ಚವನ್ನು ಭರಿಸಿ ಮಾನವೀಯತೆ ಮೆರೆದಿದ್ದಾರೆ. ವಿಶು ಶೆಟ್ಟಿ ಅವರ ಸಕಾಲಿಕ ನೆರವು ಮತ್ತು ಮಾನವೀಯತೆಯಿಂದಾಗಿ ಸುಧಾಕರ ಪವಾರ್ ಅವರಿಗೆ ಹೊಸ ಜೀವನ ದೊರೆತಂತಾಗಿದೆ.