
ಸಂಭಾಜಿ ನಗರ : ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗಿರುವ ಖಾಸಗಿ ವಿಡಿಯೋವನ್ನು ಗಂಡನಿಗೆ ಕಳಿಸಿದ ವಿಷಯ ಆತ್ಮಹತ್ಯೆಗೆ ಕಾರಣವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಗನ್ ಎಂಬಾತ ಈ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ಪತ್ನಿ ದಿವ್ಯಾ ಹಾಗೂ ಆಕೆಯ ಪ್ರಿಯಕರ ದೀಪಕ್ ಹೊಣೆದಾರರು ಎಂದು ಆತ ವಿಡಿಯೋ ಸಂದೇಶವೊಂದರಲ್ಲಿ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಮಗನ್ ಹೇಳಿದ್ದು :
ಮಗನ್ ಆತ್ಮಹತ್ಯೆಗೆ ಮೊದಲು ಒಂದು ವಿಡಿಯೋ ಮಾಡಿ, ಕಣ್ಣೀರಿಡುತ್ತಾ ಹೇಳಿದ್ದು ಹೀಗೆ:
“ನನ್ನ ಹೆಸರು – ಮಗನ್. ನನ್ನ ಪತ್ನಿ ದಿವ್ಯಾ ಮತ್ತು ಆಕೆಯ ಪ್ರಿಯಕರ ದೀಪಕ್ ಇಬ್ಬರೂ ನನಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ.ದೀಪಕ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಂಭಾಜಿ ನಗರದ ನಿವಾಸಿಯಾಗಿದ್ದು, ಬಡ್ತಿ ಪಡೆಯಲು ನನ್ನಿಂದ ಹಣ ಪಡೆದುಕೊಂಡಿದ್ದಾನೆ.ಈಗ ಮತ್ತೆ ₹1.5 ಲಕ್ಷ ಕೊಡಬೇಕೆಂದು ಒತ್ತಡ ಹಾಕುತ್ತಿದ್ದಾರೆ.ಪತ್ನಿ ದಿವ್ಯಾ ನನಗೆ ತನ್ನ ಖಾಸಗಿ ವಿಡಿಯೋ ಕಳಿಸಿದ್ದು, ಅದರಲ್ಲಿ ದೀಪಕ್ ಮುಂದೆ ಡ್ಯಾನ್ಸ್ ಮಾಡುತ್ತಿದ್ದು, ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇದ್ದಾರೆ.ಈ ವಿಡಿಯೋ ನೋಡಿದ ನಂತರ ನಾನು ತೀವ್ರವಾಗಿ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದೇನೆ.ದಿವ್ಯಾಳಿಗೆ ನನ್ನನ್ನು ಮದುವೆಯಾಗುವ ಮೊದಲು ಇನ್ನೊಂದು ಮದುವೆಯಾಗಿತ್ತು. ಅದನ್ನೂ ನಾನು ಹಣ ನೀಡಿ ಇತ್ಯರ್ಥ ಮಾಡಿಕೊಂಡಿದ್ದೆ.”
ಈ ಎಲ್ಲ ಕಾರಣಗಳಿಂದಾಗಿ ಆತ್ಮಹತ್ಯೆಗೆ ಪ್ರೇರಿತರಾಗಿ ಜೀವ ಬಿಟ್ಟಿರುವ ಮಗನ್, ತನ್ನ ಕೊನೆಯ ಮಾತಿನಲ್ಲಿ “ನನ್ನ ಸಾವಿಗೆ ದಿವ್ಯಾ ಮತ್ತು ದೀಪಕ್ ಕಾರಣ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ವಿನಂತಿಸಿದ್ದಾರೆ.
ಪೊಲೀಸರ ತನಿಖೆ ಆರಂಭ
ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಿವ್ಯಾ ಮತ್ತು ದೀಪಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೃತನ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.