
ರಾಯಚೂರು: ರಾಯಚೂರು ಜಿಲ್ಲೆಯ ಗುರ್ಜಾಪುರ ಸೇತುವೆ ಕಂ ಬ್ಯಾರೇಜ್ ಬಳಿ, ಪತ್ನಿಯೊಬ್ಬಳು ತನ್ನ ಪತಿಯನ್ನು ನದಿಗೆ ತಳ್ಳಿ ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ದಂಪತಿಗಳು ಬೈಕ್‌ನಲ್ಲಿ ಸೇತುವೆಯ ಮೇಲೆ ಬಂದಿದ್ದು, ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಪತ್ನಿ ಮೊದಲು ತಾನೇ ನಿಂತು ಫೋಟೋ ತೆಗೆಸಿಕೊಂಡಿದ್ದಾಳೆ. ನಂತರ ಪತಿಯನ್ನು ಸೇತುವೆಯ ತುದಿಗೆ ನಿಲ್ಲಿಸಿ, “ಫೋಟೋ ತೆಗೆಯುತ್ತೇನೆ” ಎಂದು ಹೇಳಿ ಆತನನ್ನು ನದಿಗೆ ತಳ್ಳಿದ್ದಾಳೆ.
ನದಿಗೆ ಬಿದ್ದ ಪತಿ ಈಜಿಕೊಂಡು ಬಂದು ಬಂಡೆಯೊಂದರ ಮೇಲೆ ಕುಳಿತಿದ್ದಾನೆ. ಆತನ ಕಿರುಚಾಟ ಕೇಳಿದ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ, ಸುಮಾರು 2 ಗಂಟೆಗಳ ಕಾಲ ನದಿಯಲ್ಲಿಯೇ ಇದ್ದ ಆತನನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ.
ರಾಯಚೂರಿನ ಶಕ್ತಿನಗರದ ನಿವಾಸಿಗಳಾದ ಈ ದಂಪತಿಗಳ ನಡುವೆ ಜಗಳವಾಗಿದ್ದು, ಇದರ ಪರಿಣಾಮವಾಗಿ ಪತ್ನಿಯು ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿ, ಫೋಟೋ ತೆಗೆಯುವ ನೆಪದಲ್ಲಿ ಈ ಕೃತ್ಯ ಎಸಗಿದ್ದಾಳೆ ಎಂದು ವರದಿಯಾಗಿದೆ.