
ನವದೆಹಲಿ: ಮಹಾಕುಂಭಮೇಳದಲ್ಲಿ ಸರಕಾರದ ದುರಾಡಳಿತ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಲೋಕಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
“ಡಿಜಿಟಲೀಕರಣದ ಬಗ್ಗೆ ಹಿಗ್ಗಿ ಮಾತಾಡಿದ ಸರಕಾರ, ಮಹಾಕುಂಭಮೇಳದಲ್ಲಿ ಕಾಲ್ತುಳಿತದಿಂದ ಮೃತಪಟ್ಟವರ ಅಂತಿಮ ಸಂಖ್ಯೆಗಳನ್ನೂ ನೀಡಲು ವಿಫಲವಾಗಿದೆ. 300 ಕಿಮೀ ಉದ್ದದ ಟ್ರಾಫಿಕ್ ಜಾಮ್‌ನಲ್ಲಿ ಭಕ್ತರು ಸಿಲುಕಿಕೊಂಡಿದ್ದಾರೆ, ಗಡಿಗಳನ್ನು ಮುಚ್ಚಲಾಗಿದೆ. ಇದು ‘ವಿಕಸಿತ್ ಭಾರತ’ದ ಚಿತ್ರಣವೇ?” ಎಂದು ಅವರು ಪ್ರಶ್ನಿಸಿದರು.
ಅಖಿಲೇಶ್ ಯಾದವ್ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸುತ್ತಾ,”ಡಬಲ್ ಇಂಜಿನ್ ಸರಕಾರ,ಡಬಲ್ ಪ್ರಮಾದ ಮಾಡುತ್ತಿದೆ. ಭೂಮಿಯ ಮೇಲಿನ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಸಾಧ್ಯವಾಗದಿದ್ದರೆ, ಚಂದ್ರನಲ್ಲಿಗೆ ಹೋಗಿ ಏನು ಮಾಡಲು ಸಾಧ್ಯ?” ಎಂದು ವ್ಯಂಗ್ಯವಾಡಿದರು.
“ಡ್ರೋನ್ ಗಳು ಎಲ್ಲಿವೆ? ಸರ್ಕಾರ ಡಿಜಿಟಲೀಕರಣದ ಬಗ್ಗೆ ಜಾಹೀರಾತು ನೀಡಿದೆ, ಆದರೆ ಮಹಾಕುಂಭಮೇಳದಲ್ಲಿ ನಾಪತ್ತೆಯಾಗಿರುವ ಅಥವಾ ಸಾವನ್ನಪ್ಪಿದವರ ಅಂಕಿಅಂಶಗಳನ್ನು ನೀಡಲು ಇನ್ನೂ ಸಾಧ್ಯವಾಗಿಲ್ಲ” ಎಂದು ಅವರು ಗಂಭೀರ ಆರೋಪ ಮಾಡಿದರು.