
ಬೆಂಗಳೂರು: ಹೊಸ ಮನೆಗಳಿಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿರುವ ಕ್ರಮವನ್ನು ಹೈಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ. ಸ್ಮಾರ್ಟ್ ಮೀಟರ್ ಮತ್ತು ಸಾಮಾನ್ಯ ಮೀಟರ್‌ಗಳ ದರ ನಿಗದಿ, ಹೆಚ್ಚುವರಿ ಶುಲ್ಕ ಹಾಗೂ ಗ್ಯಾರಂಟಿ ಸಮಸ್ಯೆಗಳ ಬಗ್ಗೆ ಕಠಿಣ ನಿಲುವು ತಳೆದ ನ್ಯಾಯಾಲಯ, “ವಿದ್ಯುತ್ ಉಚಿತವಾಗಿ ಕೊಡಿ ಎಂದವರು ಯಾರು?” ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ದೊಡ್ಡಬಳ್ಳಾಪುರದ ನಿವಾಸಿ ಜಯಲಕ್ಷ್ಮೀ ತಮ್ಮ ಹೊಸ ಮನೆಗೆ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವಂತೆ ಬೆಸ್ಕಾಂ ಉಪ ವಿಭಾಗದ ಎಇಇ ನೀಡಿದ ನೋಟಿಸ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿರುವ ಏಕಸದಸ್ಯ ಪೀಠ, ಸ್ಮಾರ್ಟ್ ಮೀಟರ್ ಕಡ್ಡಾಯ, ಹೆಚ್ಚುವರಿ ಶುಲ್ಕ ಹಾಗೂ ಸಾರ್ವಜನಿಕರ ಮೇಲೆ ತೋರುವ ಆರ್ಥಿಕ ಬಾಧೆ ಕುರಿತು ತೀವ್ರವಾಗಿ ಪ್ರಶ್ನಿಸಿತು.
“ಇದು ಉಚಿತ ಗ್ಯಾರಂಟಿಗಳ ಪರಿಣಾಮವೇ? ಜನರನ್ನು ಹಣ ಕೊಟ್ಟು ಮೀಟರ್ ಹಾಕಿಸಿಕೊಳ್ಳುವಂತಾಗಿಸುವುದು ನ್ಯಾಯವೇ? ಬಡವರು ಏನು ಮಾಡಬೇಕು?” ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು. ನ್ಯಾಯಾಲಯ ತಾತ್ಕಾಲಿಕವಾಗಿ ನೋಟಿಸ್‌ಗೆ ತಡೆ ನೀಡಿದ್ದು, ರಾಜ್ಯ ಸರಕಾರ ಹಾಗೂ ಬೆಸ್ಕಾಂಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ವಿಚಾರಣೆ ಜೂನ್ 4ಕ್ಕೆ ಮುಂದೂಡಲಾಗಿದೆ.