
ಕರ್ನಾಟಕದಲ್ಲಿ ಮದ್ಯದ ಬೆಲೆ ಈಗಾಗಲೇ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ಎರಡು ವರ್ಷಗಳಲ್ಲಿ ಮೂರು ಬಾರಿ ಬೆಲೆ ಹೆಚ್ಚಳವಾಗಿದ್ದು, ಬಿಯರ್ ದರವೂ ಏರಿಕೆಯಾಗಿದೆ. ಇದರ ನಡುವೆ, ಕೇವಲ ಕರ್ನಾಟಕ ಮಾತ್ರವಲ್ಲದೆ, ಭಾರತವೂ ಸೇರಿದಂತೆ ವಿಶ್ವದಾದ್ಯಂತ ಮದ್ಯ, ತಂಬಾಕು ಹಾಗೂ ತಂಪು ಪಾನೀಯಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ಪ್ರಸ್ತಾವನೆಯೊಂದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಸಲ್ಲಿಕೆ ಮಾಡಿದೆ. ಈ ಬೆಳವಣಿಗೆ ಮದ್ಯಪ್ರಿಯರಿಗೆ ಮತ್ತೊಂದು ಆಘಾತ ನೀಡಲಿದೆ.
ಮದ್ಯದ ಬೆಲೆ ಏರಿಕೆಯ ಪರಿಣಾಮವಾಗಿ ಕರ್ನಾಟಕದಲ್ಲಿ ಮದ್ಯದ ಖರೀದಿ ಪ್ರಮಾಣ ಈಗಾಗಲೇ ಇಳಿಕೆ ಕಂಡಿದೆ. ಮದ್ಯ ಮಾರಾಟ ಕಂಪನಿಗಳು ಸಹ ಬೆಲೆ ಇಳಿಕೆಗೆ ಒತ್ತಾಯಿಸುತ್ತಿರುವ ನಡುವೆಯೇ, ಶೇ. 50 ರಷ್ಟು ಬೆಲೆ ಏರಿಕೆಯ ಪ್ರಸ್ತಾವನೆ ಮದ್ಯಪ್ರಿಯರಲ್ಲಿ ಭಾರೀ ತಲೆಬಿಸಿ ಸೃಷ್ಟಿಸಿದೆ.
ಸೆವಿಲ್ಲೆಯಲ್ಲಿ ಆಯೋಜಿಸಿದ್ದ UN ಅಭಿವೃದ್ಧಿಗಾಗಿ ಹಣಕಾಸು ಸಮ್ಮೇಳನದಲ್ಲಿ WHO ಈ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವ ಮತ್ತು ವಿಶ್ವಾದ್ಯಂತ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಈ ಶಿಫಾರಸ್ಸು ಮಾಡಲಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ ಹಂತ ಹಂತವಾಗಿ ಈ ಬೆಲೆ ಏರಿಕೆಗಳನ್ನು ಜಾರಿಗೆ ತರಬಹುದು ಎಂದು ಹೇಳಲಾಗಿದೆ.
ಹೆಚ್ಚುವರಿ ತೆರಿಗೆಗಳನ್ನು ಜಾರಿಗೆ ತರುವ ಮೂಲಕ, ಎಲ್ಲಾ ದೇಶಗಳಲ್ಲೂ ಸಕ್ಕರೆ ಕಾಯಿಲೆ (ಡಯಾಬಿಟಿಸ್) ಮತ್ತು ಕ್ಯಾನ್ಸರ್‌ನಂತಹ ಗಂಭೀರ ರೋಗಗಳನ್ನು ಕಡಿಮೆ ಮಾಡಬಹುದು ಎಂದು WHO ಅಭಿಪ್ರಾಯಪಟ್ಟಿದೆ. ಈ ಕ್ರಮದಿಂದಾಗಿ ಜಾಗತಿಕವಾಗಿ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ಸಂಸ್ಥೆ ನಂಬಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಆರೋಗ್ಯ ತೆರಿಗೆಗಳು ಪರಿಣಾಮಕಾರಿ ಕ್ರಮಗಳಲ್ಲಿ ಒಂದಾಗಿವೆ. ಕೊಲಂಬಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ಕೆಲವು ದೇಶಗಳಲ್ಲಿ ಈಗಾಗಲೇ ಮದ್ಯ ಮತ್ತು ಸಕ್ಕರೆ ಅಂಶ ಇರುವ ತಂಪು ಪಾನೀಯಗಳ ಬೆಲೆ ಏರಿಕೆ ಮಾಡಲಾಗಿದ್ದು, ಅಲ್ಲಿ ಆರೋಗ್ಯ ಸಮಸ್ಯೆಗಳಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಲಾಗಿದೆ.