
ಕಾರ್ಕಳ: ಬೈಲೂರಿನ ಉಮಿಕ್ಕಲ್ ಬೆಟ್ಟದ ಮೇಲೆ ನಿರ್ಮಾಣವಾಗುತ್ತಿದ್ದ ಐತಿಹಾಸಿಕ ಪರಶುರಾಮ ಥೀಮ್ ಪಾರ್ಕ್‌ನ ಕಾಮಗಾರಿಯು ಸ್ಥಗಿತಗೊಂಡಿರುವ ಕುರಿತು ಜಿ.ಪಂ. ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮತ್ತು ಅವರ ತಂಡವು ಸುಳ್ಳು ಸುದ್ದಿ ಮತ್ತು ಅಪಪ್ರಚಾರದ ಮೂಲಕ ಈ ಯೋಜನೆಯನ್ನು ವಿವಾದಕ್ಕೀಡುಮಾಡಿ, ಕಾಮಗಾರಿಯನ್ನು ಹಾಳುಗೆಡವಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
“ಕಾಂಗ್ರೆಸ್‌ನ ಆರೋಪಗಳು ಸುಳ್ಳೆಂದು ಈಗ ಸಾಬೀತಾಗಿವೆ. ಪ್ರವಾಸೋದ್ಯಮ ದೃಷ್ಟಿಯಿಂದ ಮಹತ್ವದ ಈ ಯೋಜನೆಯ ಕಾಮಗಾರಿಯನ್ನು ಯಾವಾಗ ಪುನರಾರಂಭಿಸುತ್ತೀರಿ?” ಎಂದು ಸುಮಿತ್ ಶೆಟ್ಟಿ ಪ್ರಶ್ನಿಸಿದ್ದಾರೆ. “ನಮ್ಮದೇ ಸರ್ಕಾರ ಇದೆ ಎಂಬ ಕಾರಣಕ್ಕೆ ಹಣ ಬಿಡುಗಡೆ ಮಾಡದೆ, ಉತ್ತಮ ದೂರದೃಷ್ಟಿಯ ಯೋಜನೆಯ ಕಾಮಗಾರಿ ಮುಂದುವರೆಯಲು ಕಾಂಗ್ರೆಸ್ ಅಡ್ಡಿಪಡಿಸಿದೆ. ಖಾಸಗಿ ದೂರಿನ ಆಧಾರದ ಮೇಲೆ ಸರ್ಕಾರಿ ಕಾಮಗಾರಿಯನ್ನು ನಿಲ್ಲಿಸಿದ ಕೀರ್ತಿ ಉದಯ ಶೆಟ್ಟಿ ಮತ್ತು ತಂಡಕ್ಕೆ ಸಲ್ಲುತ್ತದೆ” ಎಂದು ಅವರು ವಾಗ್ದಾಳಿ ನಡೆಸಿದರು.
“ಕಾಂಗ್ರೆಸ್‌ಗೆ ಥೀಮ್ ಪಾರ್ಕ್ ಬೇಡವಾದರೂ, ಬೈಲೂರು ಮತ್ತು ಕ್ಷೇತ್ರದ ಜನತೆಗೆ ಇದು ಬೇಕಾಗಿದೆ. ಪ್ರತಿಮೆ ಫೈಬರ್ ಎಂದು ಅಪಪ್ರಚಾರ ನಡೆಸಿ, ಕಾರ್ಕಳದ ಮಾನವನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕಿದ ಕಾಂಗ್ರೆಸ್ಸಿಗರು, ಅದು ಫೈಬರ್ ಅಲ್ಲ ಎಂದು ಸಾಬೀತಾದ ಮೇಲೆ ಕ್ಷಮೆ ಕೇಳಬೇಕಿತ್ತು” ಎಂದು ಸುಮಿತ್ ಶೆಟ್ಟಿ ಆಗ್ರಹಿಸಿದ್ದಾರೆ. ಸರ್ಕಾರ ಅಧಿಕಾರವನ್ನು ಸ್ವಾರ್ಥ ಸಾಧನೆಗೆ ಬಳಸಿಕೊಂಡಿದೆ ಎಂದು ಆರೋಪಿಸಿದ ಅವರು, “ಕಾಮಗಾರಿಯು ಮೂಲ ಒಪ್ಪಂದದಂತೆ ನಡೆದಿದೆಯೇ ಎಂದು ಖಚಿತಪಡಿಸಿಕೊಳ್ಳದೆ, ಇಲಾಖೆಗೆ ಹಸ್ತಾಂತರವಾಗುವ ಮೊದಲೇ ಕಾಂಗ್ರೆಸ್ಸಿಗರು ವಿವಾದ ಸೃಷ್ಟಿಸಿದ್ದರು. ಇದೀಗ ಅವರ ಅಪಪ್ರಚಾರ ಸುಳ್ಳೆಂದು ಸಾಬೀತಾಗಿದೆ. ತನಿಖೆ ಮುಂದುವರಿಯಲಿ, ನಮಗೇನು ಆಕ್ಷೇಪವಿಲ್ಲ. ಆದರೆ, ಕಾಮಗಾರಿ ಯಾವಾಗ ಆರಂಭವಾಗುತ್ತದೆ ಮತ್ತು ಪಾರ್ಕ್ ಅನ್ನು ಯಾವಾಗ ಸಾರ್ವಜನಿಕ ವೀಕ್ಷಣೆಗೆ ಬಿಟ್ಟುಕೊಡುತ್ತೀರಿ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.