
ಬೆಂಗಳೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಇಂದು ಮತ್ತಷ್ಟು ತೀವ್ರಗೊಂಡಿದೆ. ಪ್ರತಾಪ್ ಸಿಂಹ ಅವರು ಈ ಹಿಂದೆ ನೀಡಿದ್ದ ‘ಎಸ್ಸೆಸ್ಸೆಲ್ಸಿ’ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದ ಕುರಿತು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಅನ್ನು ನಿಷೇಧಿಸುವ ಕುರಿತು ಮಾತನಾಡಿದ್ದರು. ಇದಕ್ಕೆ ಪ್ರತಿಯಾಗಿ, ಪ್ರತಾಪ್ ಸಿಂಹ, “ಇಂದಿರಾ ಗಾಂಧಿಯವರಿಂದಲೇ ಆಗಲಿಲ್ಲ, ಇನ್ನು ನಿಮ್ಮ ಕೈಯಲ್ಲಿ ಆಗುತ್ತಾ?” ಎಂದು ಪ್ರಶ್ನಿಸಿದ್ದರು.
ಪ್ರತಾಪ್ ಸಿಂಹ ಅವರ ಈ ಹೇಳಿಕೆಗೆ ತಿರುಗೇಟು ನೀಡಿದ್ದ ಪ್ರಿಯಾಂಕ್ ಖರ್ಗೆ, “ಹೆಸರಿನಲ್ಲಿ ಸಿಂಹ ಎಂದು ಹಾಕಿಕೊಂಡರೆ ನರಿಗಳೆಲ್ಲ ಸಿಂಹ ಆಗುವುದಿಲ್ಲ” ಎಂದು ಟಾಂಗ್ ನೀಡಿದ್ದರು. ಅಲ್ಲದೆ, “ಪ್ರತಾಪ್ ಸಿಂಹ ಎಸ್ಸೆಸ್ಸೆಲ್ಸಿ, ಪಿಯುಸಿ ಓದಿದವರೆಲ್ಲ ಅಪ್ಪನ ದುಡ್ಡಲ್ಲಿ ಕಾರು ಖರೀದಿಸುವಷ್ಟು ನಾವು ಅದೃಷ್ಟವಂತರಲ್ಲ” ಎಂದು ಕುಟುಕಿದ್ದರು.
ಇದಕ್ಕೆ ಇದೀಗ ಪ್ರಿಯಾಂಕ್ ಖರ್ಗೆ ಮತ್ತೊಂದು ಕೌಂಟರ್ ಕೊಟ್ಟಿದ್ದು, “ಪದೇ ಪದೇ ‘ಖರ್ಗೆ ಅವರ ಮಗ’ ಎಂದು ಹೇಳುತ್ತಾರೆ. ಹೌದು, ನನಗೆ ಆ ಹೆಮ್ಮೆ ಇದೆ. ನಿಮಗೆ ನಿಮ್ಮಪ್ಪನ ಮೇಲೆ ಹೆಮ್ಮೆ ಇಲ್ಲ ಎಂದರೆ ನಾನೇನು ಮಾಡಲಿ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ನಂತರ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, “ನಮ್ಮ ತಾತ ಮಿಲ್ ನಡೆಸಿ ನಮ್ಮ ತಂದೆಯನ್ನು ವಕೀಲರನ್ನಾಗಿ ಮಾಡಿದರು. ನಮ್ಮ ತಂದೆ ಕಷ್ಟಪಟ್ಟು ವಕಾಲತ್ತು ಮಾಡಿ ರಾಜಕೀಯ ಪ್ರವೇಶಿಸಿ, ಬ್ಲಾಕ್ ಮಟ್ಟದಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಅವರ ಕಷ್ಟದಿಂದ ನಮ್ಮ ಮನೆಯಲ್ಲಿ ಎಲ್ಲರೂ ಬೆಂಗಳೂರಿಗೆ ಬಂದು ಓದಿ ಡಬಲ್ ಡಿಗ್ರಿ ಪಡೆದಿದ್ದೇವೆ” ಎಂದು ಪ್ರತಾಪ್ ಸಿಂಹ ಅವರ ‘ಎಸ್ಸೆಸ್ಸೆಲ್ಸಿ’ ಹೇಳಿಕೆಯನ್ನು ಟೀಕಿಸಿದರು.
ಅಲ್ಲದೆ, “ನಾನು ಮೂರು ಬಾರಿ ಆಯ್ಕೆಯಾಗಿ ಬಂದಿದ್ದು, ನನ್ನ ತಂದೆ ಹಾಗೂ ಜನರ ಬೆಂಬಲವಿದೆ. ನಿಮ್ಮ ತಂದೆ ಕಷ್ಟಪಡಲಿಲ್ಲ ಎಂದರೆ ಅದು ನನ್ನ ತಪ್ಪಾ?” ಎಂದು ಪ್ರತಾಪ್ ಸಿಂಹರನ್ನು ಪ್ರಶ್ನಿಸಿದರು. “ನಿಮ್ಮ ತಂದೆ ಕಷ್ಟಪಟ್ಟು ಪತ್ರಿಕೋದ್ಯಮ ಓದಿಸಿದರು. ಅವರಿಗೆ ಆಕಾಂಕ್ಷೆ ಇಲ್ಲ ಎಂದರೆ ನಾನೇನು ಮಾಡಲಿ” ಎಂದು ಪ್ರಿಯಾಂಕ್ ಖರ್ಗೆ ಹೇಳುವ ಮೂಲಕ ತಮ್ಮ ವಾಗ್ಯುದ್ಧವನ್ನು ಮುಂದುವರೆಸಿದರು.