
ಮುಂಬಯಿ, ಏ.21: ಬಾಲಿವುಡ್‌ನ ತಾರಾ ದಂಪತಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ದಾಂಪತ್ಯ ಸಂಬಂಧದಲ್ಲಿ ಬಿರುಕು ಎನ್ನುವ ವದಂತಿಗಳಿಗೆ ತೆರೆ ಬಿದ್ದಂತಾಗಿದೆ. ತಮ್ಮ 18ನೇ ವಿವಾಹ ವಾರ್ಷಿಕೋತ್ಸವದ ದಿನ, ಐಶ್ವರ್ಯಾ ಅವರು ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯ ಜತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಅಭಿಷೇಕ್ ಮತ್ತು ಐಶ್ವರ್ಯಾ ಬಚ್ಚನ್ ದಂಪತಿ ಮಗಳ ಜತೆ ವೇದಿಕೆಯಲ್ಲಿ ನೃತ್ಯಮಾಡಿದ ವಿಡಿಯೋವೊಂದು ವೈರಲ್ ಆಗಿತ್ತು. ಇದರೊಂದಿಗೆ ಇದೀಗ ಕುಟುಂಬದ ಫೋಟೋ ಕೂಡ ವೈರಲ್ ಆಗಿದ್ದು, ಸುಮ್ಮಸುಮ್ಮನೆ ಹರಡಿದ ವಿಚ್ಛೇದನದ ವದಂತಿಗಳಿಗೆ ಸ್ಪಷ್ಟ ಉತ್ತರ ನೀಡಿದಂತಾಗಿದೆ.
ಇದಕ್ಕೂ ಮೊದಲು, ಅಂಬಾನಿ ಪುತ್ರ ಅನಂತ್ ಮತ್ತು ರಾಧಿಕಾ ಮದುವೆ ಕಾರ್ಯಕ್ರಮದಲ್ಲಿ ಬಚ್ಚನ್ ಕುಟುಂಬ ಜತೆ ಐಶ್ವರ್ಯಾ ಹಾಗೂ ಆರಾಧ್ಯ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದರು. ಇದರಿಂದಾಗಿ ಅವರ ದಾಂಪತ್ಯದಲ್ಲಿ ಬಿರುಕು ಎನ್ನುವ ಊಹಾಪೋಹಗಳು ಮತ್ತಷ್ಟು ಗಂಭೀರವಾಗಿದ್ದವು. ಅಭಿಷೇಕ್ ವಿರುದ್ಧ ನಟಿ ನಿಂಮ್ರತ್ ಕೌರ್ ಜತೆ ಸಂಬಂಧವಿದೆ ಎಂಬ ಟೀಕೆಗಳೂ ಕೇಳಿಬಂದಿದ್ದವು.
ಆದರೆ ಇದೀಗ ಶೇರ್ ಮಾಡಲಾದ ಕುಟುಂಬ ಫೋಟೋದಿಂದ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಂತಾಗಿದೆ. “ಈ ಫೋಟೋ ಎಲ್ಲಾ ವದಂತಿಗಳಿಗೆ ಕಪಾಳಕ್ಕೆ ಹೊಡೆದಂತಿದೆ” ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.