
ಉಳ್ಳಾಲ: ದೇಶದಲ್ಲಿ ಸಂಚಲನ ಮೂಡಿಸಿರುವ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ವೀರೇಂದ್ರ ಹೆಗ್ಗಡೆಯವರಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ನಡೆದ ಮುದ್ದುಕೃಷ್ಣ ಸಮಾರಂಭದಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಕಣ್ಣೀರಿಡುತ್ತ ಆತಂಕ ವ್ಯಕ್ತಪಡಿಸಿದರು.
“ಮಸೀದಿ ಮತ್ತು ಚರ್ಚ್‌ಗಳಲ್ಲಿ ಶವಗಳನ್ನು ಹೂತುಹಾಕಿಲ್ಲವೇ? ಕೇವಲ ಧರ್ಮಸ್ಥಳದಲ್ಲಿ ಮಾತ್ರವೇ ಇಂತಹದ್ದು ನಡೆಯುತ್ತಿದೆಯೇ?” ಎಂದು ಪ್ರಶ್ನಿಸಿದ ಪೂಜಾರಿ, ಈ ಆರೋಪಗಳು ಧರ್ಮಸ್ಥಳದ ಹೆಸರನ್ನು ಹಾಳು ಮಾಡುತ್ತಿವೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
“ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೊತೆ ಇಡೀ ಜಗತ್ತು ನಿಲ್ಲುತ್ತದೆ. ಇಡೀ ಕುದ್ರೋಳಿ ದೇವಸ್ಥಾನ ನಿಮ್ಮೊಂದಿಗಿದೆ, ಹೆದರಬೇಡಿ. ಧರ್ಮಸ್ಥಳದಂತಹ ದೇವಸ್ಥಾನವನ್ನು ನಡೆಸುವ ಕಷ್ಟ ನನಗೆ ಗೊತ್ತು. ವೀರೇಂದ್ರ ಹೆಗ್ಗಡೆಯವರೇ, ನಾನು ನಿಮ್ಮ ಜೊತೆಗಿದ್ದೇನೆ. ಎಸ್‌ಐಟಿ ಎಷ್ಟು ಅಗೆದರೂ ಅಲ್ಲಿ ಏನೂ ಸಿಗುವುದಿಲ್ಲ” ಎಂದು ಪೂಜಾರಿ ಟೀಕಿಸಿದರು.
“ಧರ್ಮಸ್ಥಳ ಕೇವಲ ಜೈನರಿಗೆ ಸೇರಿದ ಸ್ಥಳವಲ್ಲ, ಅದನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾನು ಕುದ್ರೋಳಿ ದೇವಸ್ಥಾನದ ಭಕ್ತನಷ್ಟೇ ಅಲ್ಲ, ಧರ್ಮಸ್ಥಳದ ಭಕ್ತನೂ ಹೌದು. ಧರ್ಮಸ್ಥಳದ ಹೆಸರು ಹಾಳು ಮಾಡಲು ಪೂಜಾರಿ ಬಿಡುವುದಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಉದ್ದೇಶಿಸಿ ಮಾತನಾಡಿದ ಪೂಜಾರಿ, “ಮೋದಿಯವರೇ, ನಿಮಗೆ ಧೈರ್ಯವಿದ್ದರೆ, ತಾಕತ್ತಿದ್ದರೆ ಧರ್ಮಸ್ಥಳಕ್ಕೆ ಹೋಗಿ ಭಾಷಣ ಮಾಡಿ” ಎಂದು ಸವಾಲು ಹಾಕಿದರು.