
ಬಾದಾಮಿ : “ನಮ್ಮ ಬಳಿ ಹಣವಿಲ್ಲ, ಸಿದ್ದರಾಮಯ್ಯನವರಲ್ಲೂ ದುಡ್ಡಿಲ್ಲ” ಎಂಬ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
ಬಾದಾಮಿಯಲ್ಲಿ ಹೊಸ ಅಗ್ನಿಶಾಮಕ ಠಾಣೆ ಕಟ್ಟಡದ ಉದ್ಘಾಟನೆಯಲ್ಲಿ ಭಾಗವಹಿಸಿದ ನಂತರ ವೇದಿಕೆಯಲ್ಲಿ ಮಾತನಾಡಿದ ಅವರು, “ನಾವು ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಮದ್ಯ ಎಲ್ಲವನ್ನೂ ಜನರಿಗೆ ಕೊಟ್ಟುಬಿಟ್ಟಿದ್ದೇವೆ. ಈಗ ಬಾದಾಮಿ ಅಭಿವೃದ್ಧಿಗೆ ಹಣ ಇಲ್ಲ. ಕೇಂದ್ರ ಸರ್ಕಾರ 1 ಸಾವಿರ ಕೋಟಿ ರೂಪಾಯಿ ನೀಡಬೇಕು. ಕೇಂದ್ರದಿಂದ ಹಣ ಬಂದರೆ ನಾವು ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು” ಎಂದು ಹೇಳಿದರು.
ವೈರಲ್ ಆದ ತಮಾಷೆಯ ಉಚ್ಛಾರಣೆ:
ಅವರ ಈ ಭಾಷಣದ ಸಮಯದಲ್ಲಿ ಸ್ಥಳೀಯ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರನ್ನು ಉದ್ದೇಶಿಸಿ, “ಸಾವಿರ ಕೋಟಿ ಕೇಳ್ಬೇಕಪ್ಪಾ, ಹೆದರಬೇಡ… ಭೀಮಸೇನನಿಗೆ ಏನಾಯ್ತಪ್ಪಾ? ಸಾವಿರ ಕೋಟಿ ಕೇಳೋಕೆ ಗಾಬರಿಯಾಗ್ತಿಯಾ?” ಎಂದು ತಮಾಷೆಯ ಭಾಷೆಯಲ್ಲಿ ಮಾತಾಡಿದ ದೃಶ್ಯವೂ ವೀಡಿಯೋದಲ್ಲಿ ದಾಖಲಾಗಿದ್ದು, ಅದು ವೈರಲ್ ಆಗಿದೆ.
ಸ್ವತಃ ಸಚಿವರಿಂದ ಸ್ಪಷ್ಟನೆ:
ಸುದ್ದಿಯ ಮೇಲೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, “ನಾನು ಯಾವತ್ತೂ ಸರ್ಕಾರದ ಬಳಿ ಹಣ ಇಲ್ಲ ಎಂದೇನೂ ಹೇಳಿಲ್ಲ. ಭಾಷಣದ ವೇಳೆ ಯಾರೋ ತಮಾಷೆಗೆ ಏನೋ ಹೇಳಿದರು, ಅದಕ್ಕೆ ನಾನೂ ತಮಾಷೆಯೇ ಪ್ರತಿಕ್ರಿಯೆ ನೀಡಿದ್ದೆ. ಸರ್ಕಾರದ ಬಳಿ ಸಾಕಷ್ಟು ಅನುದಾನವಿದೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಪ್ರತಿಕ್ರಿಯೆಗಳು:
ಈ ಹೇಳಿಕೆಯಿಂದ ಬಿಜೆಪಿ ಸೇರಿದಂತೆ ಪ್ರತಿ ಪಕ್ಷಗಳು ಕಾಂಗ್ರೆಸ್ ಸರ್ಕಾರದ ಹಣಕಾಸು ನಿಲುವಿನ ಕುರಿತು ಪ್ರಶ್ನೆ ಎಬ್ಬಿಸಿವೆ. ಸಚಿವರ ಹೇಳಿಕೆ, ಮಹತ್ವದ ಯೋಜನೆಗಳಿಗೂ ಹಣ ಇಲ್ಲದ ಸ್ಥಿತಿಗೆ ತಲುಪಿರುವುದನ್ನು ತೋರಿಸುತ್ತಿದೆಯಾ ಎಂಬ ಚರ್ಚೆಗಳು ಸಕ್ರಿಯವಾಗಿವೆ.