
ಬೆಂಗಳೂರು: ಬೇಸಿಗೆ ರಜೆಗೆ ಕುಟುಂಬ ಸಮೇತ ಊರಿಗೆ ತೆರಳುವವರು ತಮ್ಮ ಮನೆಯ ಭದ್ರತೆ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯ ಭದ್ರತೆ ಕಾಪಾಡಿಕೊಳ್ಳಲು ಸಾರ್ವಜನಿಕರು ಅನೇಕ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. ಚಿನ್ನಾಭರಣ, ನಗದು ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ಸುರಕ್ಷಿತವಾಗಿ ಇಡಬೇಕು. ಮನೆಗೆ ಗುಣಮಟ್ಟದ ಬೀಗವನ್ನು ಅಳವಡಿಸಬೇಕು, ಸಿಸಿಟಿವಿ ಕ್ಯಾಮೆರಾ ಇಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಮನೆ ಬೀಗದ ಕೀಯನ್ನು ಪಕ್ಕದ ಮನೆಯಲ್ಲೋ ಅಥವಾ ಎಲ್ಲೆಂದರಲ್ಲಿ ಇಟ್ಟು ಹೋಗಬಾರದು. ಒಂದಕ್ಕಿಂತ ಹೆಚ್ಚು ದಿನಗಳ ಪ್ರವಾಸವಿದ್ದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಹೊರಡಬೇಕು. ಇದು ಅವರಿಗೂ ಆ ಪ್ರದೇಶದಲ್ಲಿ ಗಸ್ತು ನಡೆಸಲು ನೆರವಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.