
ಬೆಂಗಳೂರು: ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಕ್ಷಿಪಣಿ ದಾಳಿಯ ಬೆನ್ನಲ್ಲೆ , ದೇಶಾದ್ಯಂತ ಭದ್ರತಾ ಎಚ್ಚರಿಕೆಯನ್ನು ಹೆಚ್ಚಿಸಲಾಗಿದೆ. ಇದರ ಅಂಗವಾಗಿ ‘ಆಪರೇಷನ್ ಅಭ್ಯಾಸ್ ’ ಹೆಸರಿನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಮಾಕ್ ಡ್ರಿಲ್ (Mock Drill) ನಡೆಯಿತು. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಇದೇ ಸಂದರ್ಭದಲ್ಲಿ ಯುದ್ಧ ಸೈರನ್‌ಗಳ ಮೂಲಕ ಸಾರ್ವಜನಿಕ ಎಚ್ಚರಿಕೆ ಅಭ್ಯಾಸ ನಡೆಸಲಾಯಿತು.
ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಾಹ್ನ 3:58 ರಿಂದ ಸಂಜೆ 4 ಗಂಟೆಯವರೆಗೆ ಎರಡು ನಿಮಿಷಗಳ ಕಾಲ ಯುದ್ಧ ಸೈರನ್ ಮೊಳಗಿಸಲಾಯಿತು. ಸುಮಾರು 35 ಪ್ರಮುಖ ಪ್ರದೇಶಗಳಲ್ಲಿ ಈ ಸೈರನ್‌ಗಳು ಧ್ವನಿಸಿದವು. ವೈಯಾಲಿಕಾವಲ್, ಉಪ್ಪಾರಪೇಟೆ ಪೊಲೀಸ್ ಠಾಣೆ, ಕಮರ್ಷಿಯಲ್ ಸ್ಟ್ರೀಟ್, ರಾಜಾಜಿನಗರ ಅಗ್ನಿಶಾಮಕ ಠಾಣೆ, ಹಲಸೂರು ಗೇಟ್ ಕೆರೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಹಲಸೂರು ಗೇಟ್ ಅಗ್ನಿಶಾಮಕ ಠಾಣೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಅಭ್ಯಾಸ ನಡೆಯಿತು.
ಭದ್ರತಾ ತಂತ್ರಜ್ಞಾನದ ಸುಧಾರಣೆ ಹಾಗೂ ಅಗಾತ ಪರಿಸ್ಥಿತಿಯಲ್ಲಿ ಸಾರ್ವಜನಿಕರ ತಕ್ಷಣದ ಪ್ರತಿಕ್ರಿಯೆ ಪರೀಕ್ಷಿಸುವ ಉದ್ದೇಶದಿಂದ ಈ ಅಭ್ಯಾಸ ನಡೆಸಲಾಗಿದೆ. ಯಾವುದೇ ಆತಂಕಕ್ಕಿಂತಲೂ ಈ ಅಭ್ಯಾಸವು ಪೂರ್ವ ಸಿದ್ಧತೆಯ ಭಾಗವಾಗಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.