
ಹೊಸದಿಲ್ಲಿ: ಭಾರತದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್ಕರ್ ಅವರು ತಮ್ಮ ಸ್ಥಾನಕ್ಕೆ ಸೋಮವಾರ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. ಅನಾರೋಗ್ಯದ ಕಾರಣ ಮತ್ತು ವೈದ್ಯಕೀಯ ಸಲಹೆಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
74 ವರ್ಷದ ಧನ್ಕರ್, ತಕ್ಷಣದಿಂದ ಜಾರಿಗೆ ಬರುವಂತೆ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದು, ತಮ್ಮ ರಾಜೀನಾಮೆಯನ್ನು ಭಾರತದ ಸಂವಿಧಾನದ 67 (ಎ) ವಿಧಿಯ ಅನುಸಾರ ಸ್ವೀಕರಿಸಬೇಕೆಂದು ಕೋರಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ದೇಶದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಸಂಪುಟಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿರುವಾಗಲೇ ಧನ್ಕರ್ ಅವರ ಈ ಹಠಾತ್ ರಾಜೀನಾಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಅಧಿಕಾರದ ಅವಧಿಯಲ್ಲಿ ಬಹಳಷ್ಟು ಕಲಿತಿದ್ದೇನೆ ಎಂದು ಹೇಳಿರುವ ಧನ್ಕರ್, ಎಲ್ಲಾ ಸಂಸದರಿಂದ ತಾವು ಪಡೆದ ಗೌರವ ಮತ್ತು ವಿಶ್ವಾಸವನ್ನು ಸದಾ ನೆನಪಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಉಪರಾಷ್ಟ್ರಪತಿಯಾಗಿ ತಾವು ಪಡೆದ ಅನುಭವಗಳು ಮತ್ತು ಒಳನೋಟಗಳಿಗೆ ಕೃತಜ್ಞನಾಗಿರುವುದಾಗಿ ಪತ್ರದಲ್ಲಿ ನಮೂದಿಸಿದ್ದಾರೆ.
ಸೋಮವಾರ ಬೆಳಗ್ಗಿನಿಂದ ರಾಜ್ಯಸಭೆಯ ಕಾರ್ಯಕಲಾಪಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಧನ್ಕರ್, ರಾತ್ರಿಯಾಗುತ್ತಿದ್ದಂತೆ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದು ಅಚ್ಚರಿ ಮೂಡಿಸಿದೆ. 2024ರ ಡಿಸೆಂಬರ್‌ನಲ್ಲಿ ಸುಮಾರು 70 ವಿರೋಧ ಪಕ್ಷದ ಸಂಸದರು ಧನ್ಕರ್ ವಿರುದ್ಧ ಪಕ್ಷಪಾತದ ಆರೋಪ ಹೊರಿಸಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಯತ್ನಿಸಿ ವಿಫಲರಾಗಿದ್ದು ಸುದ್ದಿಯಾಗಿತ್ತು.

ಹಿಂದೆ ರಾಜೀನಾಮೆ ನೀಡಿದ್ದ ವಿ.ವಿ.ಗಿರಿ:
1969ರಲ್ಲಿ ಅಂದಿನ ರಾಷ್ಟ್ರಪತಿ ಜಾಕೀರ್ ಹುಸೇನ್ ನಿಧನರಾದಾಗ, ಉಪರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇದು ದೇಶದ ಇತಿಹಾಸದಲ್ಲಿ ಉಪರಾಷ್ಟ್ರಪತಿಯ ರಾಜೀನಾಮೆಯ ಮತ್ತೊಂದು ನಿದರ್ಶನವಾಗಿದೆ.
ಮುಂದೇನು?
ಸಂವಿಧಾನದ 64ನೇ ವಿಧಿಯ ಪ್ರಕಾರ, ಭಾರತದ ಉಪರಾಷ್ಟ್ರಪತಿಗಳು ಸಂಸತ್ತಿನ ರಾಜ್ಯಸಭೆಯ ಸಭಾಪತಿ (ಛೇರ್ಮನ್) ಸ್ಥಾನದ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಸಂವಿಧಾನದ 89ನೇ ವಿಧಿಯ ಪ್ರಕಾರ, ರಾಜ್ಯಸಭೆಯ ಉಪ ಸಭಾಪತಿಗಳು ಉಪರಾಷ್ಟ್ರಪತಿಗಳು ಗೈರಾದಾಗ ಅಥವಾ ರಾಜೀನಾಮೆ ನೀಡಿದಾಗ ಆ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ನಿಭಾಯಿಸಬೇಕಾಗುತ್ತದೆ.
ಇದೀಗ ಧನ್ಕರ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದೇ ಆದಲ್ಲಿ, ಪ್ರಸ್ತುತ ಉಪ ಸಭಾಪತಿ ಆಗಿರುವ ಹರಿವಂಶ್ ನಾರಾಯಣ್ ಸಿಂಗ್ ಅವರು ಈ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ನಿಭಾಯಿಸುವ ಸಾಧ್ಯತೆಯಿದೆ. ತೆರವಾಗುವಂತಹ ಉಪರಾಷ್ಟ್ರಪತಿ ಸ್ಥಾನಕ್ಕೆ ಆದಷ್ಟು ಶೀಘ್ರವೇ ಚುನಾವಣಾ ಪ್ರಕ್ರಿಯೆ ನಡೆಯಬೇಕು ಎಂಬ ನಿಯಮವಿದೆ. ಈ ಚುನಾವಣೆಯಲ್ಲಿ ಸಂಸತ್ತಿನ ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರಿಗಷ್ಟೇ ಮತದಾನದ ಹಕ್ಕಿರುತ್ತದೆ.
ಜಗದೀಪ್ ಧನ್ಕರ್ ಅವರು 2022ರ ಆಗಸ್ಟ್‌ನಲ್ಲಿ ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಹೃದಯ ಸಂಬಂಧಿ ಕಾಯಿಲೆಗಳ ನಂತರ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ 4 ದಿನಗಳ ಕಾಲ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೂಕ್ತ ಸಮಯದಲ್ಲಿ ನಿವೃತ್ತಿಯಾಗುವೆ ಎಂದಿದ್ದ ಧನ್ಕರ್:
ದೆಹಲಿಯ ಜವಾಹಾರ್‌ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದಲ್ಲಿ ಜುಲೈ 10 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಧನ್ಕರ್, “ನಾನು ಸರಿಯಾದ ಸಮಯಕ್ಕೆ ನಿವೃತ್ತಿ ಹೊಂದಲಿದ್ದೇನೆ. 2027ರ ಆಗಸ್ಟ್‌ಗೆ ನಾನು ನಿವೃತ್ತಿ ಪಡೆಯುತ್ತೇನೆ” ಎಂದಿದ್ದರು. ಅವರ ಈ ಹೇಳಿಕೆಯ ಬೆನ್ನಲ್ಲೇ ಈಗಿನ ಹಠಾತ್ ರಾಜೀನಾಮೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.