
ವಿಟ್ಲ: ಕೇರಳ ಮೂಲದವರಾಗಿದ್ದು ಸೌದಿ ಅರೇಬಿಯಾದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ 53 ವರ್ಷದ ಮಹಮ್ಮದ್ ಅಶ್ರಫ್ ತಾವರಕಡನ್ ಎಂಬವರು, ಮದುವೆಯ ಉದ್ದೇಶದಿಂದ 2024ರ ಸೆಪ್ಟೆಂಬರ್‌ನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ಆದರೆ, ಮದುವೆಯ ನೆಪದಲ್ಲಿ ಅವರನ್ನು ಕರೆಸಿಕೊಂಡ ಆರೋಪಿಗಳ ಗುಂಪು ಫೋಟೊ ಮತ್ತು ವಿಡಿಯೋಗಳನ್ನು ಲೀಕ್ ಮಾಡುವ ಬೆದರಿಕೆ ಹಾಕಿ ಬರೋಬ್ಬರಿ ₹44.80 ಲಕ್ಷ ವಂಚಿಸಿದೆ.
ವಂಚನೆ ಮತ್ತು ಬೆದರಿಕೆ ಕೃತ್ಯ
ಮಹಮ್ಮದ್ ಅಶ್ರಫ್ ಅವರನ್ನು ಮಂಗಳೂರಿಗೆ ಕರೆಸಿದ ನಂತರ ಬಶೀರ್, ಸಫಿಯಾ ಮತ್ತು ಇತರ ಆರೋಪಿಗಳು, ಹೆಣ್ಣು ನೋಡುವ ನೆಪದಲ್ಲಿ ಅವರ ಫೋಟೋಗಳು ಮತ್ತು ವೀಡಿಯೋಗಳನ್ನು ತೆಗೆದುಕೊಂಡಿದ್ದಾರೆ. ನಂತರ ಈ ವೀಡಿಯೋಗಳನ್ನು ಸಾರ್ವಜನಿಕವಾಗಿ ಲೀಕ್ ಮಾಡುವುದಾಗಿ ಬೆದರಿಸಿ ಹಂತ ಹಂತವಾಗಿ ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡಿದ್ದಾರೆ.
ಈ ಕುರಿತು ಸಂತ್ರಸ್ತ ಮಹಮ್ಮದ್ ಅಶ್ರಫ್ ತಾವರಕಡನ್ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ, ಬಶೀರ್, ಸಫಿಯಾ ಹಾಗೂ ಇತರರ ವಿರುದ್ಧ ವಿಟ್ಲ ಠಾಣೆಯಲ್ಲಿ ಅ.ಕ್ರ: 145/2025, ಕಲಂ: 318(4), 308(2), 115(2), 351(2) ರ/ವಿ 3(5) BNS-2023 ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.