
ಬೆಂಗಳೂರು: ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರಿಗೆ ಆಘಾತ ತಂದಿರುವ ಅಭಿಮಾನ್ ಸ್ಟುಡಿಯೋದಲ್ಲಿನ ಸಮಾಧಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಹಾಗೂ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಸಮಾಧಿ ತೆರವುಗೊಳಿಸಿರುವ ನಿರ್ಧಾರ ನಮ್ಮದಲ್ಲ, ಇದು ನಮಗೂ ಅತೀವ ಬೇಸರ ತಂದಿದೆ’ ಎಂದು ಹೇಳುವ ಮೂಲಕ ಕುಟುಂಬದ ನಿಲುವನ್ನು ಅವರು ತಿಳಿಸಿದ್ದಾರೆ.
ಸುಳ್ಳು ಆರೋಪ: ಅನಿರುದ್ಧ್ ಕಿಡಿ
ಸಮಾಧಿ ಧ್ವಂಸದ ನಂತರ ಅಭಿಮಾನಿಗಳಿಂದ ಕುಟುಂಬದ ವಿರುದ್ಧ ಕೇಳಿಬಂದ ಟೀಕೆಗಳಿಗೆ ಅನಿರುದ್ಧ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಸಹಕರಿಸಿಲ್ಲ ಎಂಬುದು ಸುಳ್ಳು ಆರೋಪ. ಈ ವಿಷಯದಲ್ಲಿ ನಮ್ಮನ್ನು ಅನಾವಶ್ಯಕವಾಗಿ ವಿಲನ್ ಮಾಡುವ ಪ್ರಯತ್ನ ಸರಿಯಲ್ಲ’ ಎಂದು ಅವರು ಖಂಡಿಸಿದ್ದಾರೆ. ‘ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಆಗಬೇಕೆಂದು ನಾವು ಹಲವಾರು ಸರ್ಕಾರಿ ಕಚೇರಿಗಳನ್ನು ಅಲೆದಿದ್ದೇವೆ ಮತ್ತು ಸಂಬಂಧಪಟ್ಟವರನ್ನು ಭೇಟಿ ಮಾಡಿದ್ದೇವೆ. ಈ ಎಲ್ಲಾ ಪ್ರಯತ್ನಗಳ ಬಗ್ಗೆ ಅರಿವಿಲ್ಲದೆ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ’ ಎಂದು ಅನಿರುದ್ಧ್ ತಿಳಿಸಿದರು.
ಮೈಸೂರು ಸ್ಮಾರಕದ ಹಿಂದಿನ ಕಥೆ
ಮೈಸೂರಿನಲ್ಲಿ ನಿರ್ಮಾಣವಾಗಿರುವ ಭವ್ಯ ಸ್ಮಾರಕದ ಕುರಿತು ಮಾತನಾಡಿದ ಅನಿರುದ್ಧ್, ‘ಅಭಿಮಾನಿಗಳಿಗೆ ಬೆಂಗಳೂರಿನಲ್ಲಿ ಸ್ಮಾರಕ ಆಗಬೇಕೆಂಬ ಆಸೆ ಇತ್ತು. ನಮಗೂ ಅದೇ ಆಸೆ ಇತ್ತು. ಆದರೆ, ಇಲ್ಲಿ ಸ್ಮಾರಕಕ್ಕೆ ಜಾಗ ಸಿಗುವುದು ಅಸಾಧ್ಯವಾದಾಗ, ನಾವು ಮೈಸೂರಿನಲ್ಲಿ ಅದನ್ನು ನಿರ್ಮಿಸಲು ಮುಂದಾದೆವು. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಿರುವುದರ ಹಿಂದಿನ ಶ್ರಮವನ್ನು ಜನರು ಗಮನಿಸಬೇಕು’ ಎಂದು ಮನವಿ ಮಾಡಿದರು. ‘ಅಷ್ಟು ದೊಡ್ಡ ಸ್ಮಾರಕ ಸುಮ್ಮನೆ ನಿರ್ಮಾಣವಾಗಿಲ್ಲ. ಅದರ ಹಿಂದಿನ ನಮ್ಮ ಪರಿಶ್ರಮವನ್ನು ವ್ಯಾಪಾರೀಕರಣ ಎಂದು ಆರೋಪಿಸುವುದು ನೋವುಂಟು ಮಾಡುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬಿರುಕು ಮೂಡಿಸುವವರ ಪತ್ತೆಗೆ ಮನವಿ
ಅಭಿಮಾನಿಗಳೊಂದಿಗೆ ಕುಟುಂಬದ ಸಂಬಂಧದ ಬಗ್ಗೆ ಮಾತನಾಡಿದ ಅನಿರುದ್ಧ್, ‘ಅಭಿಮಾನಿಗಳು ನಮ್ಮ ಶಕ್ತಿ. ನಾವು ಹಲವು ಬಾರಿ ಅವರ ಬಳಿ ಬಂದು ನಮ್ಮ ಜೊತೆ ಸೇರಿಕೊಳ್ಳಿ ಎಂದು ಕೇಳಿಕೊಂಡಿದ್ದೇವೆ. ಆದರೆ, ಕೆಲವರು ನಮ್ಮ ಮತ್ತು ಅಭಿಮಾನಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳು ಯಾರೆಂದು ಮೊದಲು ಪತ್ತೆ ಹಚ್ಚಬೇಕು’ ಎಂದು ಅವರು ಹೇಳಿದರು. ‘ನಾವು ಯಾವುದೇ ಕಾರಣಕ್ಕೂ ಅಭಿಮಾನ್ ಸ್ಟುಡಿಯೋದಲ್ಲಿ ಪೂಜೆ ಮಾಡಬಾರದು ಎಂದು ಹೇಳಿಲ್ಲ. ಅಭಿಮಾನಿಗಳ ಭಾವನೆಗಳಿಗೆ ನಾವು ಸದಾ ಬೆಲೆ ಕೊಡುತ್ತೇವೆ’ ಎಂದು ಅನಿರುದ್ಧ್ ಭರವಸೆ ನೀಡಿದರು.