
ಕಾಸರಗೋಡು: ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಇದರ ಅಂಗ ಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆ ಸಮಾರಂಭವು ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದ “ಚುಟುಕು ಯುಗಾಚಾರ್ಯ ಎಂ. ಜಿ. ಆರ್ ಅರಸ್” ವೇದಿಕೆಯಲ್ಲಿ ದಿನಾಂಕ 22.02.2026 ರಂದು ಅತ್ಯಂತ ವೈಭವದಿಂದ ಜರುಗಿತು.
ನಾಡೋಜ ಡಾ. ನೇತ್ರಾಲಯ ಕೃಷ್ಣ ಪ್ರಸಾದ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ, ಉಡುಪಿಯ ಯುವ ಲೇಖಕ, ಶಿಕ್ಷಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ವಿಷ್ಣುಪ್ರಸಾದ್ ಕೊಡಿಬೆಟ್ಟು ಅವರಿಗೆ ಪ್ರತಿಷ್ಠಿತ “ಕನ್ನಡ ಪಯಸ್ವಿನಿ” ಅಂತಾರಾಜ್ಯ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ವಿವರ ಮತ್ತು ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಕನ್ನಡ ಭವನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್, ಗೌರವ ಅಧ್ಯಕ್ಷರಾದ ಪ್ರದೀಪ್ ಬೇಕಲ್, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ವೆಂಕಟ್ರಮಣ ಹೊಳ್ಳ, ಕಾರ್ಯದರ್ಶಿ ವಸಂತ ಕೆರೆಮನೆ ಹಾಗೂ ಸಂಧ್ಯಾರಾಣಿ ಬೇಕಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಪ್ರಶಸ್ತಿ ಪುರಸ್ಕೃತ ವಿಷ್ಣುಪ್ರಸಾದ್ ಅವರು ಕೊಡಿಬೆಟ್ಟಿನ ದಿವಂಗತ ದೇವದಾಸ ನಾಯಕ್ ಹಾಗೂ ಶಾಂತಾ ನಾಯಕ್ ದಂಪತಿಗಳ ಪುತ್ರರಾಗಿದ್ದಾರೆ. ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ಸೇವಾ ರಂಗದಲ್ಲಿ ಅವರು ಮಾಡುತ್ತಿರುವ ನಿರಂತರ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
































