
ವಿಶಾಖಪಟ್ಟಣ: ಮಾನವೀಯತೆ ಮರೆತ ಕಾಮುಕನೊಬ್ಬ ತನ್ನ ಸ್ನೇಹಿತನ 3 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿರುವ ಮನಕಲಕುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ತಂದೆಯ ಸ್ನೇಹಿತನೆಂಬ ನಂಬಿಕೆಯೇ ಆ ಮಗುವಿಗೆ ಮುಳುವಾಗಿ ಪರಿಣಮಿಸಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ಹೇಯ ಕೃತ್ಯ ಜರುಗಿದೆ. ಆರೋಪಿಯು ತನ್ನ ಸ್ನೇಹಿತನನ್ನು (ಮಗುವಿನ ತಂದೆ) ಭೇಟಿಯಾಗಲು ಅವರ ಮನೆಗೆ ಬಂದಿದ್ದನು. ಈ ಸಂದರ್ಭದಲ್ಲಿ ತಂದೆ ಮನೆಯಲ್ಲಿರಲಿಲ್ಲ ಹಾಗೂ ತಾಯಿ ಅಡುಗೆ ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಇದನ್ನು ದುರುಪಯೋಗಪಡಿಸಿಕೊಂಡ ಆರೋಪಿ, ಮಗುವಿಗೆ ಬಿಸ್ಕತ್ತು ಕೊಡಿಸುವುದಾಗಿ ನಂಬಿಸಿ ಹೊರಗೆ ಕರೆದೊಯ್ದಿದ್ದಾನೆ. ಅಂಗಡಿಗೆ ಹೋಗುವ ಮಾರ್ಗಮಧ್ಯದಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಕೃತ್ಯದ ನಂತರ ಯಾವುದೂ ಅರಿಯದವನಂತೆ ಮಗುವನ್ನು ವಾಪಸ್ ತಂದು ಮನೆಯಲ್ಲಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಮಗು ನೋವಿನಿಂದ ಸತತವಾಗಿ ಅಳುತ್ತಿರುವುದನ್ನು ಗಮನಿಸಿದ ತಾಯಿ, ಮಗುವನ್ನು ಪರೀಕ್ಷಿಸಿದಾಗ ರಕ್ತದ ಕಲೆಗಳು ಕಂಡುಬಂದಿವೆ. ತಕ್ಷಣ ಮಗುವನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಸಂತ್ರಸ್ತ ಮಗುವನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯ ವಿರುದ್ಧ ಬಿಎನ್‌ಎಸ್ (BNS) ಮತ್ತು ಪೋಕ್ಸೊ (POCSO) ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



































