
ವಿಜಯವಾಡ: ವಿಜಯವಾಡದ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಹದ್ದು ಡಿಕ್ಕಿ ಹೊಡೆದ ಪರಿಣಾಮ, ವಿಮಾನದ ಹಾರಾಟವನ್ನು ರದ್ದುಗೊಳಿಸಲಾಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ 90 ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ದೊಡ್ಡ ಅವಘಡ ಸಂಭವಿಸಿಲ್ಲ.
ಏರ್ ಇಂಡಿಯಾ AI 9841 ವಿಮಾನವು ಬೆಳಗ್ಗೆ 8:15ಕ್ಕೆ ವಿಜಯವಾಡದಿಂದ ಹೊರಟು 9:40ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದರೆ, ವಿಮಾನವು ಟೇಕ್-ಆಫ್‌ಗಾಗಿ ರನ್‌ವೇಗೆ ಬರುತ್ತಿದ್ದಾಗ ಹದ್ದು ನೇರವಾಗಿ ವಿಮಾನದ ಮೂತಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದಾಗಿ ವಿಮಾನ ಹಾರಾಟವನ್ನು ಕೂಡಲೇ ರದ್ದುಪಡಿಸಿ, ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.
ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಹಕ್ಕಿ ಡಿಕ್ಕಿಯ ನಂತರ, ವಿಮಾನವನ್ನು ತಾಂತ್ರಿಕ ತಪಾಸಣೆಗಾಗಿ ಎಂಜಿನಿಯರ್‌ಗಳ ತಂಡಕ್ಕೆ ಹಸ್ತಾಂತರಿಸಲಾಗಿದೆ. ಅಧಿಕಾರಿಗಳು ಘಟನೆಯ ಸಂಪೂರ್ಣ ಪರಿಶೀಲನೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಇಂತಹ ಘಟನೆಗಳು ವಿಮಾನದ ಸುರಕ್ಷತೆಗೆ ಅಪಾಯಕಾರಿಯಾಗಬಹುದು, ಆದರೆ ಈ ಸಂದರ್ಭದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಮಾನದ ಹಾನಿ ಮತ್ತು ಹಾರಾಟಕ್ಕೆ ಅದರ ಯೋಗ್ಯತೆಯ ಕುರಿತು ತನಿಖೆ ಮುಂದುವರೆದಿದೆ.