
ಚೆನ್ನೈ: ತಮಿಳುನಾಡು ರಾಜಕಾರಣ ಮತ್ತು ಸಿನಿಮಾ ರಂಗದಲ್ಲಿ ಸದ್ಯ ತಮಿಳಗ ವೆಟ್ರಿ ಕಳಗಂ (TVK) ನಾಯಕ, ನಟ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನದ ವಿದ್ಯಮಾನಗಳು ಭಾರೀ ಚರ್ಚೆಗೆ ಕಾರಣವಾಗಿವೆ. ಪತ್ನಿ ಸಂಗೀತಾ ಸೊರ್ನಲಿಂಗಂ ಅವರಿಂದ ವಿಚ್ಛೇದನ ಪಡೆಯುತ್ತಿರುವ ಪ್ರಕ್ರಿಯೆಯ ನಡುವೆಯೇ, ಚೆನ್ನೈನಲ್ಲಿ ನಡೆದ ಅದ್ಧೂರಿ ವಿವಾಹ ಆರತಕ್ಷತೆಯೊಂದರಲ್ಲಿ ನಟಿ ತ್ರಿಷಾ ಕೃಷ್ಣನ್ ಅವರೊಂದಿಗೆ ವಿಜಯ್ ಕಾಣಿಸಿಕೊಂಡಿರುವುದು ಹೊಸ ಸಂಚಲನ ಮೂಡಿಸಿದೆ. ಚಿತ್ರ ನಿರ್ಮಾಣ ಸಂಸ್ಥೆಯ ಮಾಲೀಕರಾದ ಕಲ್ಪತಿ ಸುರೇಶ್ ಅವರ ಪುತ್ರನ ಮದುವೆಯ ಈ ಸಮಾರಂಭದಲ್ಲಿ ಈ ಜೋಡಿ ಒಟ್ಟಾಗಿ ಭಾಗವಹಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇತ್ತೀಚೆಗಷ್ಟೇ ವಿಜಯ್ ಪತ್ನಿ ಸಂಗೀತಾ ಅವರು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ತಮ್ಮ 27 ವರ್ಷಗಳ ಸುದೀರ್ಘ ದಾಂಪತ್ಯವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ತಮ್ಮ ಅರ್ಜಿಯಲ್ಲಿ ಅವರು ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ದಾಂಪತ್ಯ ದ್ರೋಹ, ಮಾನಸಿಕ ಕಿರುಕುಳ ಮತ್ತು ನಿರ್ಲಕ್ಷ್ಯವನ್ನು ಪ್ರಮುಖ ಕಾರಣಗಳಾಗಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ನಟಿಯೊಬ್ಬರ ಜೊತೆಗಿನ ವಿವಾಹೇತರ ಸಂಬಂಧವೇ ಈ ಬಿರುಕಿಗೆ ಕಾರಣ ಎಂದು ಅವರು ದೂರಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ತ್ರಿಷಾ ಅವರೊಂದಿಗೆ ವಿಜಯ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಇನ್ನು ಈ ವಿಚಾರ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದ್ದು, ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅವರು ವಿಜಯ್ ಅವರ ನಟಿಯ ಜೊತೆಗಿನ ನಂಟಿನ ಬಗ್ಗೆ ನೀಡಿದ ಹೇಳಿಕೆ ಟಿವಿಕೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ಈ ಜೋಡಿಯ ವಿಡಿಯೋಗಳು ಈಗ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿವೆ.



































