
ಹೈದರಾಬಾದ್: ತೆಲುಗು ಚಿತ್ರರಂಗದ ಮೋಸ್ಟ್ ರೋಮ್ಯಾಂಟಿಕ್ ಜೋಡಿಗಳಲ್ಲಿ ಒಂದಾದ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಪ್ರೇಮ ವದಂತಿಗಳು ಕೊನೆಗೂ ನಿಜವಾಗಿವೆ. ಕಳೆದ ಶುಕ್ರವಾರ, ಈ ತಾರಾ ಜೋಡಿ ತಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
2018ರ ಹಿಟ್ ಸಿನಿಮಾ ‘ಗೀತಾ ಗೋವಿಂದಂ’ ಮೂಲಕ ಒಟ್ಟಿಗೆ ನಟಿಸಿದಾಗಿನಿಂದ ಇವರಿಬ್ಬರ ನಡುವೆ ಪ್ರೀತಿ ಚಿಗುರಿ, ಅದು ಹಲವು ವರ್ಷಗಳ ಕಾಲ ಗುಟ್ಟಾಗಿಯೇ ಉಳಿದಿತ್ತು. ಅನೇಕ ಬಾರಿ ವಿಹಾರಕ್ಕೆ ತೆರಳಿದಾಗ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಇವರ ಸಂಬಂಧದ ಕುರಿತು ಗಾಸಿಪ್‌ಗಳು ಹರಿದಾಡುತ್ತಿದ್ದವು.
ಈಗ, ನಿಶ್ಚಿತಾರ್ಥದ ಮೂಲಕ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿರುವ ಈ ಜೋಡಿ, ಮುಂದಿನ ವರ್ಷ 2026ರ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಆದರೆ, ಈ ಕುರಿತು ವಿಜಯ್ ದೇವರಕೊಂಡಾಗಲಿ ಅಥವಾ ರಶ್ಮಿಕಾ ಮಂದಣ್ಣ ಆಗಲಿ ಯಾವುದೇ ಅಧಿಕೃತ ಪ್ರಕಟಣೆಯನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ. ಇಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ಗೌಪ್ಯವಾಗಿಡಲು ಬಯಸುತ್ತಿದ್ದು, ಅಭಿಮಾನಿಗಳು ಈಗ ಅವರ ಮದುವೆಯ ಕುರಿತು ಅಧಿಕೃತ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.



































