
ಬೆಂಗಳೂರು : ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯಲ್ಪಡುವ ವಿಧಾನಸೌಧದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಕ್ತ ಸಂಚಾರ ಮತ್ತು ವರದಿಗಾರಿಕೆಗೆ ರಾಜ್ಯ ಸರ್ಕಾರ ಲಗಾಮು ಹಾಕಿದೆ. ಸಚಿವರು ಹಾಗೂ ಗಣ್ಯರ ಹೇಳಿಕೆ ಪಡೆಯಲು ಇನ್ಮುಂದೆ ನಿರ್ದಿಷ್ಟ ಚೌಕಟ್ಟನ್ನು ವಿಧಿಸಲಾಗಿದ್ದು, ಸರ್ಕಾರದ ಈ ದಿಢೀರ್ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಹೊರಡಿಸಿರುವ ನೂತನ ಆದೇಶದ ಪ್ರಕಾರ, ಮಾಧ್ಯಮದವರು ವಿಧಾನಸೌಧದ ಒಳಗೆ ಅಥವಾ ಪೋರ್ಟಿಕೋ ಬಳಿ ಗಣ್ಯರನ್ನು ಹಿಂಬಾಲಿಸುವಂತಿಲ್ಲ. ಕೇವಲ ಪಶ್ಚಿಮ ದ್ವಾರದ ಬಳಿ ನಿಗದಿಪಡಿಸಲಾದ ಜಾಗದಲ್ಲಿ ಮಾತ್ರ ಬೈಟ್ ಪಡೆಯಲು ಅವಕಾಶ ನೀಡಲಾಗಿದೆ. ಗಣ್ಯರ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಈ ನಡೆಯನ್ನು ವಿರೋಧ ಪಕ್ಷಗಳು ‘ಸರ್ವಾಧಿಕಾರಿ ಧೋರಣೆ’ ಎಂದು ಕರೆಯುವ ಮೂಲಕ ಕಟುವಾಗಿ ಟೀಕಿಸಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸರ್ಕಾರದ ಈ ನಿಲುವನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಬಣ್ಣಿಸಿದ್ದಾರೆ. ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದ್ದು, ಕೂಡಲೇ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಇತ್ತ ಸಚಿವಾಲಯದ ಒಳಗೆ ನಿರ್ಬಂಧ ಹೇರಿರುವುದು ಪಾರದರ್ಶಕತೆಗೆ ಧಕ್ಕೆ ತರುತ್ತದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲೂ ಕೇಳಿಬರುತ್ತಿದೆ.



































