
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಮತ್ತು ಪ್ರತಿಭಾವಂತ ನಟಿ ಬಿ. ಸರೋಜಾ ದೇವಿ ಅವರು ಇಂದು (ಜುಲೈ 14, 2025) ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸರೋಜಾ ದೇವಿ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.
1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದ ಸರೋಜಾ ದೇವಿ ಅವರ ತಂದೆ ಬೈರಪ್ಪ ಅವರು ಪೊಲೀಸ್ ಅಧಿಕಾರಿಯಾಗಿದ್ದರು ಮತ್ತು ತಾಯಿ ರುದ್ರಮ್ಮಾ ಗೃಹಿಣಿಯಾಗಿದ್ದರು. ತಂದೆ ಬೈರಪ್ಪ ಅವರ ಪ್ರೋತ್ಸಾಹದಿಂದಾಗಿ ಸರೋಜಾ ದೇವಿ ನೃತ್ಯ ಕಲಿತು ಚಿತ್ರರಂಗಕ್ಕೆ ಪ್ರವೇಶಿಸಿದರು.
ಸರೋಜಾ ದೇವಿ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹವಾದರು. 1986ರಲ್ಲಿ ಪತಿ ನಿಧನರಾದ ನಂತರವೂ ಅವರು ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮುಂದುವರೆಸಿದರು. ಪುನೀತ್ ರಾಜ್‌ಕುಮಾರ್ ನಟನೆಯ 2019ರಲ್ಲಿ ಬಿಡುಗಡೆಯಾದ ‘ನಟಸಾರ್ವಭೌಮ’ ಅವರ ಕೊನೆಯ ಚಿತ್ರವಾಗಿತ್ತು.
ಕೊಡಿಗೆಹಳ್ಳಿಯ ತಮ್ಮ ತೋಟದಲ್ಲಿ, ಪತಿ ಹರ್ಷ ಅವರ ಸಮಾಧಿ ಪಕ್ಕದಲ್ಲೇ ಒಕ್ಕಲಿಗ ಸಂಪ್ರದಾಯದಂತೆ ಸರೋಜಾ ದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.