
ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿ ಘಾಟಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಜೂನ್ 30ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರ (NHAI) ಕನಿಷ್ಠ ಒಂದು ತಿಂಗಳು ವಾಹನ ಸಂಚಾರ ಸ್ಥಗಿತಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಾಸನ ಜಿಲ್ಲಾಡಳಿತ, ಮಾರ್ಚ್ 15ರಿಂದ ಏಪ್ರಿಲ್ ಅಂತ್ಯದವರೆಗೆ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ನಿರ್ಬಂಧಿಸುವ ಸಾಧ್ಯತೆಯನ್ನು ಪರಿಗಣಿಸುತ್ತಿದ್ದು, ಅಧಿಕೃತ ಘೋಷಣೆ ಶೀಘ್ರವೇ ಹೊರಬೀಳುವ ನಿರೀಕ್ಷೆಯಿದೆ. ಸಂಸದ ಶ್ರೇಯಸ್ ಪಟೇಲ್ ಗುರುವಾರ ಕಾಮಗಾರಿ ಪರಿಶೀಲನೆ ನಡೆಸಿದ ಸಂದರ್ಭ, ಕಾಮಗಾರಿ ತ್ವರಿತಗೊಳಿಸಲು ಶಿರಾಡಿ ಘಾಟಿಯಲ್ಲಿ ಕನಿಷ್ಠ ಒಂದು ತಿಂಗಳ ಕಾಲ ವಾಹನ ಸಂಚಾರ ನಿರ್ಬಂಧಿಸುವ ಅಗತ್ಯವಿದೆ ಎಂದು (NHAI) ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಒಂದು ಪಥಕ್ಕೆ ಕಾಂಕ್ರೀಟ್ ಹಾಕಿದ ನಂತರ 25 ದಿನಗಳ ಕ್ಯೂರಿಂಗ್ ಅವಶ್ಯಕತೆ ಇದೆ. ಈ ಅವಧಿಯಲ್ಲಿ ವಾಹನ ಸಂಚಾರ ನಿಷೇಧವಿಲ್ಲದೆ ಕಾಮಗಾರಿ ಸಾಧ್ಯವಿಲ್ಲ ಎಂದು ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ ಸಂಸದರಿಗೆ ವಿವರಿಸಿದರು.
ಈ ಹಿಂದೆ ಶಿರಾಡಿ ಘಾಟಿಯಲ್ಲಿ ಭೂ ಕುಸಿತ ಸಂಭವಿಸಿದ್ದ ಹಿನ್ನೆಲೆಯಲ್ಲಿ, ಈಗ ರಸ್ತೆ ಜತೆಗೆ ತಡೆಗೋಡೆ ನಿರ್ಮಾಣವೂ ಪ್ರಗತಿಯಲ್ಲಿದೆ. ಸಕಲೇಶಪುರದ ದೋಣಿಗಾಲ್ ಕ್ರಾಸ್‌ನಿಂದ ಮಾರನಹಳ್ಳಿವರೆಗೆ ಒಟ್ಟು 10 ಕಿ.ಮೀ. ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದ್ದು, ಈಗಾಗಲೇ 4.8 ಕಿ.ಮೀ. ಭಾಗ ಪೂರ್ಣಗೊಂಡಿದೆ.
ವಾಹನ ಸಂಚಾರ ನಿಷೇಧಿಸುವ ದಿನಾಂಕ ಹಾಗೂ ಪರ್ಯಾಯ ಮಾರ್ಗಗಳ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು (NHAI) ಅಧಿಕಾರಿಗಳು ತಿಳಿಸಿದ್ದಾರೆ.