
ವ್ಯಾಟಿಕನ್ ಸಿಟಿ, ಏಪ್ರಿಲ್ 21 – ರೋಮನ್ ಕ್ಯಾಥೋಲಿಕ್ ಚರ್ಚ್‌ನ ಧರ್ಮಗುರು, ವ್ಯಾಟಿಕನ್ ಸಿಟಿಯ ಪ್ರಧಾನ ಪೋಪ್ ಫ್ರಾನ್ಸಿಸ್ (88) ಸೋಮವಾರ ತಮ್ಮ ನಿವಾಸದಲ್ಲಿ ನಿಧನರಾದರು. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನ್ಯುಮೋನಿಯಾ ಮತ್ತು ಶ್ವಾಸಕೋಶ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಅನಾರೋಗ್ಯ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೇ ಆರೋಗ್ಯವು ಮತ್ತಷ್ಟು ಹದಗೆಡುತ್ತಾ ಹೋಯಿತು. ಶ್ವಾಸಕೋಶ ಸಮಸ್ಯೆಯೊಂದಿಗೆ ಕಿಡ್ನಿ ತೊಂದರೆ ಸಹ ಕಾಣಿಸಿಕೊಂಡಿತ್ತು. ಕೊನೆದಿನಗಳಲ್ಲಿ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡು, ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾ ನಿವಾಸದಲ್ಲಿ ವಿಶ್ರಾಂತ ಜೀವನದಲ್ಲಿದ್ದ ಅವರು, ಏ.21ರಂದು ಬೆಳಗಿನ ಹೊತ್ತಿನಲ್ಲಿ ವಿಧಿವಶರಾದರು.
ಪೋಪ್ ಫ್ರಾನ್ಸಿಸ್ ಅವರು 2013ರಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚಿನ ಪೋಪ್ ಆಗಿ ಆಯ್ಕೆಯಾಗಿದ್ದು, ಚರ್ಚಿನ ಇತಿಹಾಸದಲ್ಲಿ ಲ್ಯಾಟಿನ್ ಅಮೆರಿಕದ ಪ್ರಥಮ ಪೋಪ್ ಎಂಬ ವಿಶಿಷ್ಟ ಸ್ಥಾನವನ್ನು ಹೊಂದಿದ್ದರು. ದಯೆ, ಸಮಾನತೆ, ಬಡವರ ಸೇವೆ ಎಂಬ ಅಂಶಗಳಿಗಾಗಿ ಅವರು ಚರ್ಚುಮಟ್ಟದಲ್ಲಿ ವಿಶ್ವಾದ್ಯಂತ ಜನಪ್ರಿಯರಾಗಿದ್ದರು.