
ವಸೈ: ಮುಂಬೈ ಸಮೀಪದ ವಸೈ ನಗರದಲ್ಲಿ ಮಾನವೀಯತೆಯನ್ನು ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ 12 ವರ್ಷದ ಬಾಂಗ್ಲಾದೇಶ ಮೂಲದ ಅಪ್ರಾಪ್ತ ಬಾಲಕಿಯ ಮೇಲೆ ಮೂರು ತಿಂಗಳ ಅವಧಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಪುರುಷರು ಅತ್ಯಾಚಾರ ಎಸಗಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಈಗಾಗಲೇ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಪೋಷಕರ ಭಯದಿಂದ ಬಾಂಗ್ಲಾದೇಶದಿಂದ ಪರಿಚಿತ ಮಹಿಳೆಯೊಬ್ಬರೊಂದಿಗೆ ಭಾರತಕ್ಕೆ ಬಂದಿದ್ದ ಬಾಲಕಿ, ತನ್ನನ್ನು ನಂಬಿಸಿದ ಮಹಿಳೆಯಿಂದಲೇ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಲ್ಪಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದಾಳೆ. ಮಹಿಳೆ ಈ ಬಾಲಕಿಯನ್ನು ಮೊದಲು ಗುಜರಾತ್‌ನ ನಾಡಿಯಾಡ್‌ಗೆ ಕರೆದೊಯ್ದಿದ್ದಳು. ಅಲ್ಲಿ ಮೂರು ತಿಂಗಳ ಕಾಲ ನೂರಾರು ಪುರುಷರ ಲೈಂಗಿಕ ದೌರ್ಜನ್ಯಕ್ಕೆ ಬಾಲಕಿ ಬಲಿಯಾಗಿದ್ದಾಳೆ.
ಮೀರಾ-ಭಾಯಂದರ್ ವಸೈ-ವಿರಾರ್ (MBVV) ಪೊಲೀಸ್ ವಿಭಾಗದ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ಜುಲೈ 26, 2025 ರಂದು ಈ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ. ಪೊಲೀಸರ ತನಿಖೆಯ ಸಂದರ್ಭದಲ್ಲಿ ಬಾಲಕಿ ಈ ಭೀಕರ ಘಟನೆಯನ್ನು ವಿವರಿಸಿದ್ದಾಳೆ. ಈ ಜಾಲದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಾರ್ಮನಿ ಫೌಂಡೇಶನ್ ಸಂಸ್ಥಾಪಕ ಅಬ್ರಹಾಂ ಮಥಾಯ್ ಒತ್ತಾಯಿಸಿದ್ದಾರೆ.
ಪೊಲೀಸ್ ಆಯುಕ್ತ ನಿಕೇತ್ ಕೌಶಿಕ್ ಅವರ ಮಾರ್ಗದರ್ಶನದಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ದಂಧೆಯ ಸಂಪೂರ್ಣ ಜಾಲವನ್ನು ಭೇದಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಪತ್ತೆಹಚ್ಚಿ ಬಂಧಿಸಲು ವ್ಯಾಪಕ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ಅಮಾನವೀಯ ಕೃತ್ಯದ ಬಗ್ಗೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬಾಲಕಿಗೆ ನ್ಯಾಯ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.