
ನವದೆಹಲಿ: ಮಹಿಳೆಯರ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ವಿರುದ್ಧ ಹೋರಾಡಲು ಅಭಿವೃದ್ಧಿಪಡಿಸಿರುವ ಲಸಿಕೆ ಇನ್ನು 5-6 ತಿಂಗಳಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಸಚಿವ ಪ್ರತಾಪ್‌ರಾವ್ ಜಾಧವ್ ತಿಳಿಸಿದ್ದಾರೆ.
ಈ ಲಸಿಕೆಯ ಸಂಶೋಧನೆ ಅಂತಿಮ ಹಂತದಲ್ಲಿದ್ದು, ಪ್ರಸ್ತುತ ಪ್ರಯೋಗಗಳು ನಡೆಯುತ್ತಿವೆ. ಒಂಬತ್ತರಿಂದ 16 ವರ್ಷ ವಯಸ್ಸಿನ ಹುಡುಗಿಯರಿಗೆ ಈ ಲಸಿಕೆ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಲಾಗುತ್ತದೆ. ರೋಗವನ್ನು ಪ್ರಾರಂಭದಲ್ಲೇ ಪತ್ತೆಹಚ್ಚಲು ಡೇಕೇರ್ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಜಾಧವ್ ತಿಳಿಸಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಸರ್ಕಾರವು ಮನ್ನಾ ಮಾಡಿರುವುದರಿಂದ, ರೋಗಿಗಳಿಗೆ ಅದು ಕಡಿಮೆ ವೆಚ್ಚದಲ್ಲಿ ಲಭ್ಯವಾಗಲಿದೆ.