
ವಾಷಿಂಗ್ಟನ್/ನವದೆಹಲಿ – ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿರುವ ಹೊಸ ಆಮದು ಸುಂಕ ನೀತಿಯು ಈಗ ಭಾರತಕ್ಕೂ ಆರ್ಥಿಕ ಹೊಡೆತ ನೀಡುವ ಸಂಭವವಿದೆ. ವಿಶ್ವದ ಹಲವು ದೇಶಗಳ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸಿದ ಬೆನ್ನಲ್ಲೇ, ಈಗ ಔಷಧ ಉತ್ಪನ್ನಗಳ ಮೇಲೂ ಭಾರೀ ಆಮದು ಸುಂಕ ಜಾರಿಗೊಳಿಸಲು ಅಮೆರಿಕ ಸಿದ್ಧತೆ ನಡೆಸುತ್ತಿದೆ.
ಈ ನಿರ್ಧಾರದಿಂದ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಔಷಧ ಉತ್ಪಾದಕರಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂಬ ಆತಂಕ ತಜ್ಞರಲ್ಲಿ ವ್ಯಕ್ತವಾಗಿದೆ. ಇದುವರೆಗೆ ಅಮೆರಿಕದ ಸುಂಕ ಜಾರಿಗೆ ಫಾರ್ಮಾ ಮತ್ತು ಸೆಮಿಕಂಡಕ್ಟರ್ ವಲಯಗಳನ್ನು ಹೊರತುಪಡಿಸಲಾಗಿತ್ತು. ಆದರೆ ಈಗ ಈ ಎರಡೂ ವಲಯಗಳನ್ನೂ ಒಳಗೊಂಡಂತೆ ಆಮದು ಸುಂಕ ವಿಧಿಸುವ ಚಿಂತನೆ ಇದೆ ಎಂದು ಮೂಲಗಳು ತಿಳಿಸುತ್ತವೆ.
ಭಾರತದ ಔಷಧ ವಲಯಕ್ಕೆ ದೊಡ್ಡ ಹೊಡೆತ
ಭಾರತವು ಅಮೆರಿಕಕ್ಕೆ ಔಷಧ ರಫ್ತು ಮಾಡುವ ಪ್ರಮುಖ ದೇಶವಾಗಿದ್ದು, 2024ರಲ್ಲಿ ಒಟ್ಟು 27.9 ಬಿಲಿಯನ್ ಡಾಲರ್ ಮೌಲ್ಯದ ಔಷಧ ಉತ್ಪನ್ನಗಳನ್ನು ರಫ್ತು ಮಾಡಿದೆ. ಈ ಪೈಕಿ ಶೇ.31 ರಷ್ಟು (8.7 ಬಿಲಿಯನ್ ಡಾಲರ್) ಅಮೆರಿಕಕ್ಕೆ ಮಾತ್ರ ರಫ್ತು ಮಾಡಲಾಗಿದೆ.
ಜನರಿಕ್ ಔಷಧಗಳಲ್ಲಿ ಶೇ.45 ರಷ್ಟು ಹಾಗೂ ಬಯೋಸಿಮಿಲರ್ ಔಷಧಗಳಲ್ಲಿ ಶೇ.15 ರಷ್ಟು ಅಮೆರಿಕ ಭಾರತದಿಂದ ಆಮದು ಮಾಡುತ್ತಿದೆ. ಡಾ. ರೆಡ್ಡಿಸ್, ಸನ್ ಫಾರ್ಮಾ, ಝಡುಸ್, ಅರಬಿಂದೋ ಫಾರ್ಮಾ ಮತ್ತು ಸ್ಟ್ಯಾಂಡ್ ಫಾರ್ಮಾ ಮುಂತಾದ ಪ್ರಮುಖ ಭಾರತೀಯ ಕಂಪನಿಗಳು ತಮ್ಮ ಒಟ್ಟು ಆದಾಯದ ಶೇ.30 ರಿಂದ 50 ರಷ್ಟು ಭಾಗವನ್ನು ಅಮೆರಿಕ ಮಾರುಕಟ್ಟೆಯಿಂದ ಪಡೆಯುತ್ತಿವೆ.
ಅಮೆರಿಕಕ್ಕೂ ಬೆಲೆ ಏರಿಕೆ ಆಘಾತ!
ಅಮೆರಿಕ ಈ ಸುಂಕ ಜಾರಿಗೊಳಿಸಿದರೆ, ಅಲ್ಲಿಯ ಗ್ರಾಹಕರಿಗೆ ಬೆಲೆ ಏರಿಕೆ, ಔಷಧ ಕೊರತೆ ಮತ್ತು ದುಬ್ಬರ ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಭಾರತದಿಂದ ಆಮದು ಮಾಡುತ್ತಿರುವ ಕಡಿಮೆ ಬೆಲೆಯ ಜನರಿಕ್ ಔಷಧಿಗಳಿಲ್ಲದೆ ಅಮೆರಿಕದ ಆರೋಗ್ಯ ವ್ಯವಸ್ಥೆಯು ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.
ಟ್ರಂಪ್ ತೀರ್ಮಾನದಿಂದ ಚೀನಾಗೂ ಹೊಡೆತ
ಚೀನಾದ ಉತ್ಪನ್ನಗಳ ಮೇಲೆ ಈಗಾಗಲೇ ಶೇ.104 ರಷ್ಟು ಸುಂಕ ವಿಧಿಸಿ, ಏಪ್ರಿಲ್ 9 ರಿಂದ ಜಾರಿಗೆ ತಂದಿರುವ ಅಮೆರಿಕ, ಜಾಗತಿಕ ಮಟ್ಟದಲ್ಲಿ ‘ಟ್ರೇಡ್ ವಾರ್ ‘ ಗೆ ನಾಂದಿ ಹಾಡಿದೆ. ಅಮೆರಿಕದ ಉತ್ಪನ್ನಗಳ ಮೇಲೆ ವಿಧಿಸಿರುವ ಶೇಕಡಾ 34 ರಷ್ಟು ಸುಂಕವನ್ನು ಹಿಂತೆಗೆದುಕೊಳ್ಳಲು ಟ್ರಂಪ್ ಈಗಾಗಲೇ ಚೀನಾಗೆ ಅಂತಿಮ ಎಚ್ಚರಿಕೆಯನ್ನು ನೀಡಿದ್ದಾರೆ.