
ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿನ ವಾರಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನಿಷ್ಠ ನಾಲ್ಕು ಬಾರಿ ಕರೆ ಮಾಡಿದ್ದಾರೆ. ಆದರೆ, ಮೋದಿ ಕರೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಜರ್ಮನ್‌ನ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.
ಜರ್ಮನಿಯ ‘ಫ್ರಾಂಕ್‌ಫರ್ಟರ್ ಆಲ್‌ಮೈನ್’ ಪತ್ರಿಕೆಯು ಈ ಬಗ್ಗೆ ವರದಿ ಮಾಡಿದ್ದು, ಪ್ರಧಾನಿ ಮೋದಿಯವರ ಈ ನಿರ್ಧಾರವು ‘ಅವರ ಕೋಪ ಮತ್ತು ಎಚ್ಚರಿಕೆಯ ಹೆಜ್ಜೆಯ’ ಪರಿಣಾಮ ಎಂದು ವಿಶ್ಲೇಷಿಸಿದೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಪ್ರತೀಕಾರವಾಗಿ ಅಮೆರಿಕ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ ನಂತರವೂ ಟ್ರಂಪ್ ಅವರು ಕರೆ ಮಾಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಈ ವರದಿಯ ಪ್ರತಿಯನ್ನು ಬರ್ಲಿನ್ ಮೂಲದ ಗ್ಲೋಬಲ್ ಪಬ್ಲಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಸಹ-ಸಂಸ್ಥಾಪಕ ಥಾರ್ಸ್ಟನ್ ಬೆನ್ನರ್ ಅವರು X ನಲ್ಲಿ ಹಂಚಿಕೊಂಡಿದ್ದಾರೆ. ಟ್ರಂಪ್ ಅವರು ಸಾಮಾನ್ಯವಾಗಿ ಸುಂಕ ವಿಧಿಸುವ ಮೂಲಕ ಅಮೆರಿಕದ ಮಾರುಕಟ್ಟೆಯ ಮೇಲಿನ ಅವಲಂಬನೆಯನ್ನು ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ, ಆದರೆ ಮೋದಿ ಇದನ್ನು ವಿರೋಧಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ತಮ್ಮ ಮೊದಲ ಅವಧಿಯಲ್ಲಿ ಟ್ರಂಪ್ ಅವರೊಂದಿಗೆ ಉತ್ತಮ ಸಹಕಾರದ ಸಂಬಂಧವನ್ನು ಇಟ್ಟುಕೊಂಡಿದ್ದ ಮೋದಿ, ಇದೀಗ ಭಾರತದ ಆರ್ಥಿಕ ಹಿತಾಸಕ್ತಿಗಳ ರಕ್ಷಣೆಗೆ ಕಠಿಣ ನಿಲುವು ತಾಳಿದ್ದಾರೆ ಎಂದು ವರದಿ ಹೇಳಿದೆ.