
ಅಮೆರಿಕದಲ್ಲಿ ತಯಾರಿಸಲಾಗಿರುವ ಒಂದು ವಿಚಿತ್ರ ರುಚಿಯ ಐಸ್ ಕ್ರೀಂ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ಈ ಐಸ್ ಕ್ರೀಂನ ವಿಶೇಷತೆ ಎಂದರೆ ಇದು ತಾಯಿಯ ಎದೆ ಹಾಲಿನ ರುಚಿಯನ್ನು ಹೋಲುತ್ತದೆ ಎಂದು ಹೇಳಲಾಗುತ್ತಿದೆ. ಈ ವಿಶಿಷ್ಟ ಐಸ್ ಕ್ರೀಂಅನ್ನು ‘ಫ್ರಿಡಾ’ (Frida) ಮತ್ತು ‘ಆಡ್ ಫೆಲೋಸ್ ಐಸ್ ಕ್ರೀಮ್ ಕಂಪನಿ’ (OddFellows Ice Cream Co) ಎಂಬ ಎರಡು ಅಮೆರಿಕನ್ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
‘ಫ್ರಿಡಾ’ ಕಂಪನಿಯು ಶಿಶು ಹಾಗೂ ಪೋಷಕರ ಆರೈಕೆಗೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದ್ದರೆ, ‘ಆಡ್ ಫೆಲೋಸ್’ ಸಂಸ್ಥೆ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಐಸ್ ಕ್ರೀಂಗಳನ್ನು ತಯಾರಿಸುವುದರಲ್ಲಿ ಹೆಸರುವಾಸಿಯಾಗಿದೆ. ಇವೆರಡೂ ಕಂಪನಿಗಳು ಒಟ್ಟಾಗಿ ಈ ವಿಶೇಷ ಸುವಾಸನೆಯ ಐಸ್ ಕ್ರೀಂಅನ್ನು ಸಿದ್ಧಪಡಿಸಿವೆ. ಈ ಉತ್ಪನ್ನವನ್ನು ಪ್ರಚಾರ ಮಾಡುವ ಉದ್ದೇಶದಿಂದ, ‘ಫ್ರಿಡಾ’ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪ್ರಚಾರದ ಪೋಸ್ಟ್ ಅನ್ನು ಹಂಚಿಕೊಂಡಿದೆ. ಈ ಪೋಸ್ಟ್‌ನಲ್ಲಿ ‘Breast Milk Ice Cream’ ಎಂದು ಬರೆದಿರುವ ಹಾಲಿನ ಟ್ಯಾಂಕರ್ ಟ್ರಕ್ ಕಾಣಿಸಿಕೊಂಡಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ರುಚಿ ಸೃಷ್ಟಿಯ ಹಿಂದಿನ ರಹಸ್ಯ
‘ತಾಯಿಯ ಎದೆ ಹಾಲಿನ ರುಚಿ’ ಎಂದು ಇದನ್ನು ಜಾಹೀರಾತು ಮಾಡಲಾಗಿದ್ದರೂ, ವಾಸ್ತವದಲ್ಲಿ ಈ ಐಸ್ ಕ್ರೀಂಅನ್ನು ನಿಜವಾದ ಎದೆ ಹಾಲಿನಿಂದ ತಯಾರಿಸಿಲ್ಲ ಎಂದು ವರದಿಗಳು ತಿಳಿಸಿವೆ. ಯುಎಸ್ಎ ಟುಡೇ (USA Today) ಪ್ರಕಾರ, ‘ಫ್ರಿಡಾ’ ಕಂಪನಿ ನೀಡಿರುವ ಹೇಳಿಕೆಯಲ್ಲಿ ಈ ಐಸ್ ಕ್ರೀಂ ತಯಾರಿಸಲು ಬಳಸಿದ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿದೆ. ಅದರ ಪ್ರಕಾರ, ಈ ಐಸ್ ಕ್ರೀಂನಲ್ಲಿ ಹಾಲು, ಹೆವಿ ಕ್ರೀಂ, ಕೆನೆ ತೆಗೆದ ಹಾಲಿನ ಪುಡಿ, ಡೆಕ್ಸ್ಟ್ರೋಸ್ (ಕಾರ್ನ್ ಅಥವಾ ಗೋಧಿಯಿಂದ ತಯಾರಿಸಿದ ಸಿಹಿಯಾದ ಅಂಶ), ಮೊಟ್ಟೆಯ ಹಳದಿ ಭಾಗ, ಇನ್ವರ್ಟ್ ಶುಗರ್, ಗೌರ್ ಗಮ್, ಉಪ್ಪು ಸಹಿತ ಕ್ಯಾರಮೆಲ್ ಸುವಾಸನೆ, ಜೇನು ಸಿರಪ್, ಹಾಗೂ ಆಹಾರದಲ್ಲಿ ಬಳಸುವ ಹಳದಿ ಬಣ್ಣವನ್ನು ಸೇರಿಸಲಾಗಿದೆ.
ಇದರೊಂದಿಗೆ, ತಾಯಿಯ ಎದೆ ಹಾಲಿನ ರುಚಿಯನ್ನು ಕೃತಕವಾಗಿ ಸೃಷ್ಟಿಸಲು ಕೆಲವು ವಿಶೇಷ ಖಾದ್ಯ ರಾಸಾಯನಿಕಗಳು ಮತ್ತು ಇತರ ಪದಾರ್ಥಗಳನ್ನು ಬಳಸಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಈ ಸಂಯೋಜನೆಯಿಂದಾಗಿ ಐಸ್ ಕ್ರೀಂಗೆ ಒಂದು ವಿಶಿಷ್ಟವಾದ, ಸಿಹಿ, ಸ್ವಲ್ಪ ಉಪ್ಪು ಮತ್ತು ಜೇನುತುಪ್ಪದ ಮಿಶ್ರ ರುಚಿ ಸಿಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಮಿತಿಯುಳ್ಳ ಉತ್ಪಾದನೆ ಹಾಗೂ ಜಾಹೀರಾತು
ತಮ್ಮ ಈ ಉತ್ಪನ್ನವನ್ನು ತಿನ್ನುವಾಗ ಬಾಲ್ಯದ ನೆನಪುಗಳು ಮರುಕಳಿಸುತ್ತವೆ ಎಂದು ಕಂಪನಿ ಜಾಹೀರಾತಿನಲ್ಲಿ ತಿಳಿಸಿದೆ. ಈ ವಿಶೇಷ ಐಸ್ ಕ್ರೀಂ ಅನ್ನು ಬಹಳ ಸೀಮಿತ ಪ್ರಮಾಣದಲ್ಲಿ ಉತ್ಪಾದಿಸಲಾಗಿದೆ. ಆದ್ದರಿಂದ, ಸ್ಟಾಕ್ ಇರುವವರೆಗೂ ‘ಫ್ರಿಡಾ’ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಇದನ್ನು ಖರೀದಿಸಬಹುದು. ಈ ವಿಶಿಷ್ಟ ಪ್ರಯೋಗವು ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಅಮೆರಿಕದ ಗ್ರಾಹಕರಲ್ಲಿ ಹೊಸ ರೀತಿಯ ಕುತೂಹಲ ಮೂಡಿಸಿದೆ.