
ಪೆನ್ಸುಲ್ವೇನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಫೆಮಿಡಾ ಹ್ಯಾಂಡಿ ಹಾಗೂ ವಿನೋದ್ ದೀಕ್ಷಿತ್ ನೇತೃತ್ವದ 8 ಮಂದಿ ವಿದ್ಯಾರ್ಥಿಗಳ ತಂಡವು ಉಡುಪಿ ತಾಲೂಕಿನ ಮಣಿಪಾಲ ವಲಯದ ಆತ್ರಾಡಿ ಗ್ರಾಮದ ‘ಶ್ರೀ ಮಂಜುನಾಥ ಸ್ವಸಹಾಯ ಸಂಘ’ಕ್ಕೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಗ್ರಾಮೀಣ ಮಹಿಳೆಯರು ಸಂಘಟಿತರಾಗಿ ಹೇಗೆ ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ ಎಂಬುದನ್ನು ತಂಡವು ಹತ್ತಿರದಿಂದ ಗಮನಿಸಿತು. ನಂತರ ಪೆರ್ಡೂರು ವಲಯದ ದುಗ್ಗಬೆಟ್ಟು ಪ್ರದೇಶದಲ್ಲಿನ ‘ನೇತಾಜಿ ಪ್ರಗತಿ ಬಂಧು’ ತಂಡದ ಸದಸ್ಯರೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು, ಕೃಷಿ ಪೂರಕ ಚಟುವಟಿಕೆಗಳು ಮತ್ತು ಗುಂಪು ಕೃಷಿಯ ಯಶಸ್ಸಿನ ಬಗ್ಗೆ ಮಾಹಿತಿ ಪಡೆದರು.
ಹೈನುಗಾರಿಕೆ ಮತ್ತು ಮಹಿಳಾ ಸಬಲೀಕರಣಕ್ಕೆ ಮೆಚ್ಚುಗೆ
ತಂಡವು ಅಂಬಲಪಾಡಿ ವಲಯದ ‘ಶ್ರೀನಿಧಿ ಸ್ವಸಹಾಯ ಸಂಘ’ ಹಾಗೂ ಉಡುಪಿ ವಲಯದ ‘ಕಲ್ಪವೃಕ್ಷ ಜ್ಞಾನವಿಕಾಸ ಕೇಂದ್ರ’ಕ್ಕೆ ಭೇಟಿ ನೀಡಿ, ಅಲ್ಲಿನ ಸದಸ್ಯರು ಕೈಗೊಂಡಿರುವ ಹೈನುಗಾರಿಕೆ ಮತ್ತು ಸಣ್ಣ ಪ್ರಮಾಣದ ಸ್ವಯಂ ಉದ್ಯೋಗಗಳ ಕುರಿತು ವಿಮರ್ಶೆ ನಡೆಸಿತು. ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಶಕ್ತಿ ತುಂಬುವಲ್ಲಿ ಧರ್ಮಸ್ಥಳ ಯೋಜನೆಯು ಜಾಗತಿಕ ಮಟ್ಟದ ಮಾದರಿಯಾಗಿದೆ ಎಂದು ವಿದೇಶಿ ವಿದ್ಯಾರ್ಥಿಗಳು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಯೋಜನಾಧಿಕಾರಿಗಳಾದ ಸುರೇಂದ್ರ ನಾಯ್ಕ್, ಸ್ವಪ್ನ, ಸಾರ್ವಜನಿಕ ಸಂಪರ್ಕ ಅಧಿಕಾರಿ ದಿಲೀಪ್ ಜೈನ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದು, ತಂಡಕ್ಕೆ ಸಮಗ್ರ ಮಾಹಿತಿ ನೀಡಿದರು.



































