
ಕುಂದಾಪುರ: ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯ ಸಮುದ್ರದಲ್ಲಿ ಅವೈಜ್ಞಾನಿಕವಾಗಿ ಬೆಳಕು ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿರುವುದರಿಂದ ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲ್ ಕ್ರಮಗಳನ್ನು ನಿಷೇಧಿಸಲಾಗಿದೆ.
ಮಾರ್ಚ್ 14 ರಂದು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶ್ರೀ ಸಿದ್ದಿ, ಗಂಗಾಮಾತಾ, ಶ್ರೀ ಯಕ್ಷೇಶ್ವರಿ ಕೃಪಾ 3 ಎಂಬ ಬೋಟುಗಳು ಬೆಳಕು ಮೀನುಗಾರಿಕೆ ನಡೆಸುತ್ತಿರುವುದು ಪತ್ತೆಯಾಯಿತು.
ಉಡುಪಿ ಜಿಲ್ಲಾ ಮೀನುಗಾರಿಕೆ ಜಂಟಿ ನಿರ್ದೇಶಕರು ಮತ್ತು ಆರ್ಬಿಟ್ರೇಟರ್ ಅವರಿಂದ ಈ ಬೋಟುಗಳ ಮಾಲಕರಿಗೆ ತಲಾ ₹5,000 ರಂತೆ ₹15,000 ದಂಡ ವಿಧಿಸಲಾಗಿದೆ. ಬೋಟು ಮಾಲಕರು ದಂಡವನ್ನು ಪಾವತಿಸಿ ಬೋಟುಗಳನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ.
ಅದೆ ರೀತಿ IND KA 03 MM 5000 ನೋಂದಣಿ ಸಂಖ್ಯೆಯ ಬೋಟ್‌ನಲ್ಲಿ ಜನರೇಟರ್ ಅಳವಡಿಸಿ ಬೆಳಕು ಮೀನುಗಾರಿಕೆ ನಡೆಸುತ್ತಿರುವುದು ಕೂಡ ಪತ್ತೆಯಾಗಿದ್ದು, ಈ ಬೋಟ್ ಮಾಲಕರಿಗೂ ₹5,000 ದಂಡ ವಿಧಿಸಲಾಗಿದೆ.
ಬೋಟುಗಳಲ್ಲಿ ಅಳವಡಿಸಿದ್ದ ಜನರೇಟರ್ ಹಾಗೂ ಬೆಳಕು ಮೀನುಗಾರಿಕೆಗೆ ಸಂಬಂಧಿಸಿದ ಲೈಟಿಂಗ್ ಉಪಕರಣಗಳನ್ನು ತೆರವುಗೊಳಿಸಿ ಬೋಟು ಬಿಡುಗಡೆಗೊಳಿಸಲಾಗಿದೆ.
ನಿಷೇಧಿತ ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲ್ ನಿಯಂತ್ರಣಕ್ಕೆ ಮೀನುಗಾರಿಕಾ ಇಲಾಖೆ ಮತ್ತು ಕರಾವಳಿ ಕಾವಲು ಪೊಲೀಸ್ ಇಲಾಖೆ ಜಂಟಿಯಾಗಿ ಫ್ಲೈಯಿಂಗ್ ಸ್ವಾಡ್ ರಚಿಸಿದ್ದು, ಈ ತಂಡವು ಮಲ್ಪೆ ಮತ್ತು ಗಂಗೊಳ್ಳಿ ಬಂದರಿನಲ್ಲಿ ನಿರಂತರ ತಪಾಸಣೆ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.