
ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಶರಾವತಿ ಹಿನ್ನೀರಿನ ಮೇಲೆ ನಿರ್ಮಿಸಲಾಗಿರುವ, ದೇಶದ ಎರಡನೇ ಅತಿ ಉದ್ದದ ಸಿಗಂಧೂರು ತೂಗು ಸೇತುವೆಯನ್ನು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು ಲೋಕಾರ್ಪಣೆ ಮಾಡಿದರು. ಸುಮಾರು 473 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ ಮಲೆನಾಡು ಭಾಗದ ಜನರ ದಶಕಗಳ ಕನಸನ್ನು ನನಸು ಮಾಡಿದೆ.
ಲಿಂಗನಮಕ್ಕಿ ಜಲಾಶಯದ ನಂತರ ಸಾಗರ ತಾಲೂಕಿನ ತುಮರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಹಳ್ಳಿಗಳಿಗೆ ಲಾಂಚ್‌ಗಳೇ ಏಕೈಕ ಸಂಪರ್ಕ ಸಾಧನವಾಗಿತ್ತು. ಸಂಜೆ ನಂತರ ಈ ಗ್ರಾಮಗಳಿಗೆ ಸಾಗರದಿಂದ ಸಂಪರ್ಕವೇ ಇರಲಿಲ್ಲ. ಈಗ ಈ ಸೇತುವೆ ನಿರ್ಮಾಣದಿಂದ ಗ್ರಾಮಸ್ಥರಿಗೆ ದೊಡ್ಡ ಅನುಕೂಲವಾಗಿದ್ದು, ಇಡೀ ದಿನ ಸಂಪರ್ಕ ಲಭ್ಯವಾಗಿದೆ. 2018ರಲ್ಲಿ ಇದೇ ನಿತಿನ್ ಗಡ್ಕರಿ ಅವರು ಸಾಗರ ತಾಲೂಕಿನ ಅಂಬಾರಗೋಡು-ಕಳಸವಳ್ಳಿ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು, ಈಗ ಅವರೇ ಲೋಕಾರ್ಪಣೆ ಮಾಡಿದ್ದಾರೆ.

ಸಿಗಂಧೂರು ಸೇತುವೆ ಉದ್ಘಾಟನೆಯ ಬಳಿಕ, ಗಡ್ಕರಿ ಅವರು ಮಧ್ಯಾಹ್ನ 12 ಗಂಟೆಗೆ ಸಾಗರದ ನೆಹರು ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಂಜೂರಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದರು. ಇದರಲ್ಲಿ 625 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ 369 ಇ – ಸಾಗರದಿಂದ ಮರುಕುಟಕದವರೆಗೆ ಸಾಗರ ನಗರದ ಬೈಪಾಸ್ ಸೇರಿ ದ್ವಿಪಥ ಸಂಪರ್ಕ ರಸ್ತೆಯ ಶಂಕುಸ್ಥಾಪನಾ ಸಮಾರಂಭವೂ ಸೇರಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2056 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಲಾಯಿತು.
ಸುಮಾರು 2.25 ಕಿಲೋಮೀಟರ್ ಉದ್ದವಿರುವ ಈ ಸೇತುವೆಯು 11 ಮೀಟರ್ ರಸ್ತೆ ಅಗಲವನ್ನು ಹೊಂದಿದೆ. ಒಟ್ಟು 17 ಪಿಲ್ಲರ್‌ಗಳನ್ನು ಹೊಂದಿರುವ ಇದು, ಕೇಬಲ್-ಸೈಡ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಇದು ಎಕ್‌ಸಟ್ರಾಡೋಸ್ ಬ್ಯಾಲೆನ್ಸ್‌ಡ್ ಕ್ಯಾಂಟಿಲಿವರ್ ಸೇತುವೆ ವಿನ್ಯಾಸವನ್ನು ಅನುಸರಿಸಿದೆ. ಭಾರತದಲ್ಲಿಯೇ ಅತಿ ದೊಡ್ಡ ಕೇಬಲ್ ಹಿಡಿತದ ಸೇತುವೆ ಗುಜರಾತ್‌ನ ದ್ವಾರಕಾದಲ್ಲಿ ಇದೆ.