
ಉಳ್ಳಾಲ: ಪಶ್ಚಿಮ ಬಂಗಾಳ ಮೂಲದ 20 ವರ್ಷದ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಮಂಗಳೂರು ಸಮೀಪದ ಉಳ್ಳಾಲದ ರಾಣಿಪುರ ಬಳಿ ನಡೆದಿದೆ. ಬುಧವಾರ ತಡರಾತ್ರಿ ನೇತ್ರಾವತಿ ನದಿ ತಟದ ಬಳಿಯಲ್ಲಿ ಯುವತಿ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಸ್ಥಳೀಯರಿಗೆ ಕಂಡುಬಂದಿದ್ದು, ಘಟನೆ ಕುರಿತು ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತ ಪಶ್ಚಿಮ ಬಂಗಾಳ ಮೂಲದ ಸಂತ್ರಸ್ತ ಯುವತಿ ಉದ್ಯೋಗ ಅರಸಿ ಕೇರಳದ ಉಪ್ಪಳ ಪ್ರದೇಶದಲ್ಲಿ ವಾಸವಿದ್ದು, ಮಂಗಳೂರಿಗೆ ಸ್ನೇಹಿತನೊಂದಿಗಾಗಿ ಆಗಮಿಸಿದ್ದಳು. ಇಬ್ಬರ ನಡುವೆ ಏನೋ ಕಾರಣಕ್ಕೆ ಗಲಾಟೆ ನಡೆದಿದ್ದು ಸ್ನೇಹಿತ ಅವಳ ಮೊಬೈಲ್ ಫೋನಿಗೆ ಹಾನಿ ಮಾಡಿದ್ದ , ನಂತರ ಅವಳು ತನ್ನ ಫೋನ್ ರಿಪೇರಿ ಮಾಡಲು ಆಟೋ ಹತ್ತಿದ್ದಾಳೆ. ನಂತರ ಚಾಲಕ ಸಹಾಯ ಮಾಡುವ ನೆಪದಲ್ಲಿ ತನ್ನ ವಾಹನದಲ್ಲಿ ಕುಳ್ಳಿರಿಸಿ 5-6 ಗಂಟೆಗಳ ಕಾಲ ಆಕೆ ಆಟೋ ಡ್ರೈವರ್ ಜೊತೆಗೇ ಇದ್ದು, ಅವನ ಜೊತೆಗೆ ಗೆಳೆತನ ಆಗಿದೆ. ಮೊಬೈಲ್ ರಿಪೇರಿ ಹಣ ಕೂಡಾ ಆತನೇ ಪಾವತಿಸಿದ್ದ. ಆ ಬಳಿಕ ಆಕೆ ರಾತ್ರಿ ವೇಳೆ ಪ.ಬಂಗಾಳ ಹೋಗಲು ರೈಲ್ವೇ ನಿಲ್ದಾಣಕ್ಕೆ ಬಿಡಲು ಆಟೋ ಡ್ರೈವರಿಗೆ ಹೇಳುತ್ತಾಳೆ. ಆದರೆ ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಹೋಗದೇ ಆಟೋ ಡ್ರೈವರ್ ಮತ್ತಿಬ್ಬರ ಗೆಳೆಯರನ್ನು ಕರೆಸಿ ಬೇರೊಂದು ಜಾಗಕ್ಕೆ ಹೋಗುತ್ತಾರೆ. ಆ ಜಾಗದಲ್ಲಿ ಆಕೆಗೆ ಚೆನ್ನಾಗಿ ಮದ್ಯಪಾನ ಮಾಡಿಸಿ, ಆಕೆ ಪ್ರಜ್ಞೆ ತಪ್ಪಿದ್ದು, ಪ್ರಜ್ಞೆ ಬಂದಾಗ ಅತ್ಯಾಚಾರ ನಡೆದಿರುವುದು ಆಕೆ ಗಮನಕ್ಕೆ ಬಂದಿದೆ.
ಅಪಘಾತದ ನಂತರ ಗಾಯಗೊಂಡ ಯುವತಿ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ನೆರೆಮನೆಯ ಬಾಗಿಲು ತಟ್ಟಿದ್ದು, ನೀರು ಕೇಳುತ್ತಿದ್ದಂತೆಯೇ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದಾಳೆ. ಮನೆಮಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಅವಳನ್ನು ಚಿಕಿತ್ಸೆಗಾಗಿ ಐಸಿಯು ವಾರ್ಡ್ ಗೆ ಸೇರಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೂಲ್ಕಿಯ ಆಟೋರಿಕ್ಷಾ ಚಾಲಕ ಮತ್ತು ಕುಂಪಲ ಮತ್ತು ಮಂಗಳೂರಿನ ಇಬ್ಬರು ಸಹಚರರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂಲ್ಕಿಯ ಆಟೋ ಚಾಲಕ ಪ್ರಭುರಾಜ್ (38), ಕುಂಪಲದ ಎಲೆಕ್ಟ್ರಿಷಿಯನ್ ಮಿಥುನ್ (30) ಮತ್ತು ಮಂಗಳೂರು ನಿವಾಸಿ ಮಣಿ (30) ಎಂದು ಗುರುತಿಸಲಾಗಿದೆ.ಮುಂದಿನ ವಿಚಾರಣೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಮರ್ಮಾಂತಿಕ ಘಟನೆ ಸ್ಥಳೀಯರಲ್ಲಿ ಆಕ್ರೋಶ ಉಂಟುಮಾಡಿದ್ದು, ಸಾರ್ವಜನಿಕರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.