
ಮಂಗಳೂರು, ಜ.17: ಉಳ್ಳಾಲ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತುರ್ತು ಸಭೆ ನಡೆಸಿದ್ದು, ಶೀಘ್ರವೇ ಆರೋಪಿಗಳ ಪತ್ತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ
ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯಕ್ರಮ ಮುಗಿದ ಬಳಿಕ ಪಶ್ಚಿಮ ವಲಯ ಐಜಿ ಅಮಿತ್, ಪೊಲೀಸ್ ಆಯುಕ್ತ ಅಕ್ಷಯ್ ಸಿಂಗ್, ಎಸ್ಪಿ ಯತೀಶ್, ಡಿವೈಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ತುರ್ತು ಸಭೆ ನಡೆಸಿದರು.
ಸಿಎಂ ಪ್ರಶ್ನೆಗಳು
ಘಟನೆ ಕುರಿತು ಮಾಹಿತಿ ಪಡೆದ ಸಿಎಂ, ‘ನೀವೆಲ್ಲ ಇರುವಾಗ ಹೀಗಾಯಿತು ಹೇಗೆ? ಟೋಲ್ ದಾಟಿ ಆರೋಪಿಗಳು ಹೇಗೆ ಪರಾರಿಯಾದರು? ಟೋಲ್ ಗಳನ್ನು ಕೂಲಂಕುಷವಾಗಿ ಪರಿಶೀಲಿಸಲಿಲ್ಲವೇ?’ ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಮಾಹಿತಿ
ಸಹಕಾರಿ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೆ ಕೆಲವೇ ಸಿಬ್ಬಂದಿ ಇದ್ದರು. ಆರೋಪಿಗಳು ಕನ್ನಡ ಮತ್ತು ಹಿಂದಿಯಲ್ಲಿ ಮಾತನಾಡಿರುವುದು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿಗ್ಬಂಧನ ಮತ್ತು ಕಠಿಣ ಕ್ರಮದ ಸೂಚನೆ
ಎಲ್ಲಾ ಟೋಲ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಮತ್ತು ನಾಲ್ಕು ಜಿಲ್ಲೆಗಳಲ್ಲಿ ನಾಕಬಂಧಿ ವಿಧಿಸಬೇಕು. ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.
ಘಟನೆಯ ತನಿಖೆಯನ್ನು ತೀವ್ರಗೊಳಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.