
ಉಡುಪಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಅವರು ತಮ್ಮ ಪತ್ನಿ ಜ್ಯೋತಿ ಜೋಶಿಯೊಂದಿಗೆ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಠದ ಪರ್ಯಾಯ ಪೀಠಾಧಿಪತಿ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾದರು. ಮಠದಿಂದ ಪ್ರಹ್ಲಾದ್ ಜೋಶಿಗೆ ಗೌರವ ಸಮರ್ಪಿಸಲಾಯಿತು. ಅನಂತರ ಅವರು ಮಠದಲ್ಲಿಯೇ ಅನ್ನಪ್ರಸಾದ ಸ್ವೀಕರಿಸಿದರು.
ರನ್ನಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಸಚಿವರ ಆರೋಪ
ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ ರನ್ನಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬಗ್ಗೆ ತೀವ್ರ ಟೀಕೆ ಮಾಡಿದರು. “ರಾಜ್ಯ ಸರ್ಕಾರದ ಅಧಿಕಾರಿಗಳು ಆರೋಪಿಗೆ ಎಸ್ಕಾರ್ಟ್ ನೀಡಿದ್ದಾರೆ. ಪ್ರೋಟೊಕಾಲ್ ವ್ಯವಸ್ಥೆ ಮಾಡಿ ಚೆಕ್ಪಾಯಿಂಟ್‌ಗಳಲ್ಲಿ ಚೆಕ್ಕಿಂಗ್ ಇಲ್ಲದೆ ಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯದ ಮಂತ್ರಿಗಳ ಹೆಸರು ಕೇಳಿಬರುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಗೃಹ ಸಚಿವ ಪರಮೇಶ್ವರ್ ಮೊದಲು ಸಿಐಡಿಗೆ ತನಿಖೆ ನೀಡಿದ್ದರು. ನಂತರ ಡಿಜಿಐ ರಾಮಚಂದ್ರ ರಾವ್ ಅವರಿಗೆ ಹಸ್ತಾಂತರಿಸಲಾಯಿತು. ಈಗ ಅಡಿಷನಲ್ ಚೀಫ್ ಸೆಕ್ರೆಟರಿಗೆ ತನಿಖೆ ನೀಡಲಾಗಿದೆ. ಕಸ್ಟಮ್ ತಪ್ಪಿಸಿ ಪ್ರೋಟೊಕಾಲ್ ಮೂಲಕ ಹೇಗೆ ಆರೋಪಿಯನ್ನು ಕರೆತರಲಾಯಿತು? ಭಾರತ ಸರ್ಕಾರದ ಇಂಟೆಲಿಜೆನ್ಸ್ ಬರುವವರೆಗೆ ರಾಜ್ಯದ ಇಂಟೆಲಿಜೆನ್ಸ್ ಏನು ಮಾಡುತ್ತಿತ್ತು? ಇಂತಹ ದುರ್ಮಾರ್ಗದ ಕೃತ್ಯಗಳಿಗೆ ಈ ದುಡ್ಡು-ಬಂಗಾರಗಳು ಬಳಕೆಯಾಗುತ್ತವೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ನಡೆದುಕೊಳ್ಳಬೇಕು. ಸಂಪೂರ್ಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು,” ಎಂದು ಆಗ್ರಹಿಸಿದರು.
ರೂಪಾಯಿ ಚಿಹ್ನೆ ವಿವಾದ: ಡಿಎಂಕೆ ಸರ್ಕಾರದ ನಿರ್ಧಾರವನ್ನು ಟೀಕಿಸಿದರು
ರೂಪಾಯಿ ಚಿಹ್ನೆಯನ್ನು ನಿರಾಕರಿಸಿದ ಡಿಎಂಕೆ ಸರ್ಕಾರದ ನಿರ್ಧಾರವನ್ನು ಟೀಕಿಸಿದ ಪ್ರಹ್ಲಾದ್ ಜೋಶಿ, “ಇದು ದುರ್ದೈವದ ನಿರ್ಧಾರ. ರೂಪಾಯಿ ಚಿಹ್ನೆಯನ್ನು ಮೋದಿ ಅಥವಾ ಬಿಜೆಪಿ ಸರ್ಕಾರ ರೂಪಿಸಿಲ್ಲ. ಕಾಂಗ್ರೆಸ್ ಸರ್ಕಾರದ ಕಾಲದಲ್ಲೇ ಇದು ರೂಪುಗೊಂಡಿದೆ. ಆಗ ಎ.ರಾಜ, ದಯಾನಿಧಿ ಮಾರನ್, ಚಿದಂಬರಂ ಅವರಂತಹವರು ಸರ್ಕಾರದಲ್ಲಿದ್ದರು. ಅವರು ಯಾಕೆ ಈ ನಿರ್ಧಾರ ತೆಗೆದುಕೊಂಡರು? ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸಿದವರು ತಮಿಳುನಾಡಿನವರೇ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಕ್ಷುಲ್ಲಕ ರಾಜಕೀಯಕ್ಕೆ ಇಳಿದಿವೆ. ಇಂಡಿ ಘಟಕಗಳು ಇಂತಹ ವಿವಾದಗಳನ್ನು ಸೃಷ್ಟಿಸುತ್ತಿವೆ,” ಎಂದು ಕಟುವಾಗಿ ಟೀಕಿಸಿದರು.
ಅಲ್ಲದೆ, “ಡಿಎಂಕೆ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಈ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ತ್ರಿಭಾಷಾ ಸೂತ್ರವನ್ನು ನೆಹರೂ ಕಾಲದಿಂದಲೂ ಅನುಸರಿಸಲಾಗುತ್ತಿದೆ. ಹೊಸ ಎನ್‌ಇಪಿಯಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಲು ನಾವು ಸೂಚಿಸಿದ್ದೇವೆ. ಆದರೆ ಹಿಂದಿಯನ್ನು ಒತ್ತಾಯಿಸಲಾಗಿಲ್ಲ. ಡಿಎಂಕೆ ಸರ್ಕಾರ ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸುತ್ತಿದೆ,” ಎಂದು ಹೇಳಿದರು.



ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ
ಈ ಸಂದರ್ಭದಲ್ಲಿ ಪ್ರಹ್ಲಾದ್ ಜೋಶಿ ಅವರು ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ ಮತ್ತು ಮುಖಂಡ ಶಶಾಂಕ್ ಸರಳಾತ್ತಾಯ ಸಾಥ್ ಅವರು ಸಹ ಉಪಸ್ಥಿತರಿದ್ದರು.




































